ಬೆಂಗಳೂರು : ದೀಪಾವಳಿ ಹಬ್ಬದ ದಿನದಂದೇ ಫರ್ನಿಚರ್ ಶೋ ರೂಂ ಅಗ್ನಿಗಾಹುತಿಯಾದ ಘಟನೆ ಭಾನುವಾರ ತಡರಾತ್ರಿ ಹೊರಮಾವು ಬಳಿಯ ಔಟರ್ ರಿಂಗ್ ರೋಡ್ನಲ್ಲಿ ನಡೆದಿದೆ. ಐದು ಅಂತಸ್ತಿನ ಕಟ್ಟಡದ ನೆಲಮಹಡಿ ಹಾಗೂ ಮೊದಲನೇ ಮಹಡಿಯಲ್ಲಿದ್ದ ಫರ್ನಿಚರ್ ಶೋರೂಂ ಅಗ್ನಿಗಾಹುತಿಯಾಗಿದೆ.
ಕಟ್ಟಡದಲ್ಲಿ ಕೋಚಿಂಗ್ ಸೆಂಟರ್ ಹಾಗೂ ಖಾಸಗಿ ಕಂಪನಿಯೊಂದು ಇತ್ತು. ರಾತ್ರಿ 12 ಗಂಟೆ ಸುಮಾರಿಗೆ ಫರ್ನಿಚರ್ ಶೋರೂಮಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಟ್ಟಡದಲ್ಲಿ ಸಿಲುಕಿದ್ದ ಮೂವರು ಸೆಕ್ಯೂರಿಟಿ ಗಾರ್ಡ್ ಗಳನ್ನ ರಕ್ಷಿಸಿದ್ದಾರೆ.
ಬೆಂಕಿ ಅವಘಡದಲ್ಲಿ ಫರ್ನಿಚರ್ ಶೋರೂಂ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಉಳಿದಂತೆ ಕೋಚಿಂಗ್ ಸೆಂಟರ್ ಹಾಗೂ ಖಾಸಗಿ ಕಂಪನಿಗೆ ಸಣ್ಣಪುಟ್ಟ ಹಾನಿಗಳಾಗಿವೆ. ಫರ್ನೀಚರ್ ಶೋರೂಮಿನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದರಿಂದ ಅಗ್ನಿ ಅವಘಡ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಬಂದ ನಾಲ್ಕು ಅಗ್ನಿಶಾಮಕದಳದ ಸಿಬ್ಬಂದಿ ಸಂಪೂರ್ಣವಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ವರದಿಯಾಗಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: ಮೈಸೂರು: ಸೌತ್ ಇಂಡಿಯನ್ ಪೇಪರ್ ಮಿಲ್ನಲ್ಲಿ ಕಾಣಿಸಿಕೊಂಡ ಬೆಂಕಿ; ಲಕ್ಷಾಂತರ ಮೌಲ್ಯದ ವಸ್ತು ಭಸ್ಮ
ಇತ್ತೀಚಿನ ಘಟನೆ- ಗ್ಯಾರೇಜ್‌ನಲ್ಲಿ 18 ಬಸ್‌ಗಳು ಬೆಂಕಿಗಾಹುತಿ : ಬೆಂಗಳೂರಿನ ವೀರಭದ್ರ ನಗರದ ಗ್ಯಾರೇಜ್‌ನಲ್ಲಿ ಅಕ್ಟೋಬರ್ 30ರಂದು ನಡೆದಿದ್ದ ಅಗ್ನಿ ಅವಘಡದಲ್ಲಿ ಒಟ್ಟು 18 ಖಾಸಗಿ ಬಸ್‌ಗಳು ಸುಟ್ಟು ಕರಕಲಾಗಿದ್ದವು. ಎಸ್ವಿ ಕೋಚ್ ಗ್ಯಾರೇಜ್‌ನಲ್ಲಿ ಹೊಸ ಹಾಗೂ ಹಳೆಯ ಬಸ್ ಇಂಜಿನ್‌ಗಳಿಗೆ ಬಾಡಿ ಅಳವಡಿಸುವ ಕೆಲಸ ಮಾಡಲಾಗುತ್ತಿತ್ತು. ವೆಲ್ಡಿಂಗ್ ವೇಳೆ ಸಿಡಿದ ಕಿಡಿಯಿಂದಾಗಿ ಗ್ಯಾರೇಜ್‌ನಲ್ಲಿ ಬೆಂಕಿ ಅವಘಡ ಉಂಟಾಗಿದ್ದು, ಗ್ಯಾರೇಜ್ನಲ್ಲಿದ್ದ ಇತರ ಬಸ್‌ಗಳಿಗೆ ಬೆಂಕಿಯ ಕೆನ್ನಾಲಿಗೆ ಆವರಿಸಿತ್ತು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರು. ಬೆಂಕಿ ಅವಘಡ ಬಳಿಕ ಘಟನಾ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಮಾತನಾಡಿದ್ದ ಡಿ ಕೆ ಶಿವಕುಮಾರ್, ವೆಲ್ಡಿಂಗ್ ಸಂದರ್ಭ ಉಂಟಾದ ಕಿಡಿಯಿಂದ ಒಂದು ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ನಂತರ ಅದು ಬೇರೆ ಬಸ್‌ಗಳಿಗೆ ವ್ಯಾಪಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಹೇಳಿದ್ದರು.
ಬಸ್ ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ: : ಅಕ್ಟೋಬರ್ 31ರಂದು ವೀರಭದ್ರನಗರದ ಗ್ಯಾರೇಜ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್ಎಆರ್ (ಫೈರ್ ಆಕ್ಸಿಡೆಂಟಲ್ ರಿಪೋರ್ಟ್) ದಾಖಲಾಗಿದೆ. ಅಗ್ನಿ ಅವಘಡ ಸಂಭವಿಸಿದ್ದು, ಹೇಗೆ? ಪರಿಣಾಮವೇನು ಎಂಬುದರ ಕುರಿತು ಎಫ್ಎಆರ್ ದಾಖಲಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯ, ಅಗ್ನಿಶಾಮಕ ಇಲಾಖೆ ಹಾಗೂ ಸಾರಿಗೆ ಇಲಾಖೆಗಳ ವರದಿ ಕೈ ಸೇರಿದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದರು.