ಬೆಂಗಳೂರು: ಖರೀದಿ ಮಾಡಿದ ಬಳಿಕ ವಾರಂಟಿ ಅವಧಿ ಮುಗಿಯುವ ಮುನ್ನವೇ ಫೋನ್‌ನಲ್ಲಿ ಕಾಣಿಸಿಕೊಂಡಿದ್ದ ದೋಷವನ್ನು ಸರಿಪಡಿಸದೇ, ಗೊಂದಲ ಸೃಷ್ಠಿಸಿದ್ದ ಪ್ರತಿಷ್ಟಿತ ಮೊಬೈಲ್ ಕಂಪನಿಗೆ ನಗರದ ಗ್ರಾಹಕರ ಪರಿಹಾರ ವೇದಿಕೆ 30 ಸಾವಿರ ರೂಪಾಯಿ ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಪ್ರಕರಣದ ದೂರುದಾರರಿಗೆ ಪರಿಹಾರವಾಗಿ ನೀಡಲು ಸೂಚಿಸಿದೆ.
ಬೆಂಗಳೂರಿನ ಫ್ರೆಜರ್ ಟೌನ್ ನಿವಾಸಿ ಅವೇಜ್ ಖಾನ್ ಎಂಬವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ನಗರದ ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆಯ ಅಧ್ಯಕ್ಷರಾದ ಎಂ.ಶೋಭಾ ಅವರಿದ್ದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ. ಮೊಬೈಲ್ ಇಲ್ಲದೇ ದೂರುದಾರರು ಅನುಭವಿಸಿರುವ ಆರ್ಥಿಕ ನಷ್ಟ ಪರಿಹಾರವಾಗಿ 20 ಸಾವಿರ ರೂ. ಹಾಗೂ ಕಾನೂನು ಹೋರಾಟದ ವೆಚ್ಚವಾಗಿ 10 ಸಾವಿರ ರೂ. ಸೇರಿ ಒಟ್ಟು 30 ಸಾವಿರ ರೂ. ನೀಡಬೇಕು. ಜೊತೆಗೆ ಮೊಬೈಲ್‌ನ ಸಂಪೂರ್ಣ ವೆಚ್ಚವನ್ನು (79,900) ಹಿಂದಿರುಗಿಸಬೇಕು ಎಂದು ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ?: ದೂರುದಾರರು 2021ರ ಅಕ್ಟೋಬರ್ 29 ರಂದು ಪ್ರತಿಷ್ಟಿತ ಕಂಪನಿಯ ಫೋನ್ ಖರೀದಿಸಿದ್ದರು. ಇದರಲ್ಲಿ ಸ್ಪೀಕರ್ ಹಾಗೂ ಬ್ಯಾಟರಿಯಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಇಂದಿರಾನಗರದ ಪ್ಲಾನೆಟ್ ಕೇರ್‌ಗೆ ಸರ್ವಿಸ್‌ಗೆ 2022ರ ಆಗಸ್ಟ್ 18ರಂದು ನೀಡಿದ್ದರು. ಇದನ್ನು ಪಡೆದುಕೊಂಡಿದ್ದ ಸರ್ವಿಸ್ ಸೆಂಟರ್, ಬ್ಯಾಟರಿ ಮತ್ತು ಸ್ಪೀಕರ್‌ನಲ್ಲಿ ದೋಷವಿದ್ದು ಏಳು ದಿನಗಳಲ್ಲಿ ಸರಿಪಡಿಸಿಕೊಡುವುದಾಗಿ ಭರವಸೆ ನಿಡಿದ್ದರು. ಇದಾದ ಬಳಿಕ 2022ರ ಆಗಸ್ಟ್ 25 ರಂದು ಕರೆ ಮಾಡಿ ಫೋನ್ ಪಡೆದುಕೊಳ್ಳುವಂತೆ ತಿಳಿಸಿದ್ದರು.
ನಂತರ 2022ರ ಆಗಸ್ಟ್ 30ರಂದು ಫೋನ್ ಪಡೆದುಕೊಂಡು ಪರಿಶೀಲನೆ ನಡೆಸಿದಾಗ ಮತ್ತದೇ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ತಕ್ಷಣ ದೂರುದಾರರು ಪೋನ್ ಹಿಂದುರಿಗಿಸಿದ್ದರು. ಇದಾದ ಕೆಲ ದಿನಗಳ ಬಳಿಕ ಫೋನ್ ಮೆಷ್‌ನಲ್ಲಿ ಧೂಳು ಅಥವಾ ಅಂಟು ಸೇರಿಕೊಂಡಿದೆ. ಹೀಗಾಗಿ ವಾರಂಟಿ ಬಳಕೆ ಮಾಡಲಾಗದು. ಸರಿಪಡಿಸಲು ವೆಚ್ಚವಾಗಲಿದೆ ಎಂದು ತಿಳಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ದೂರುದಾರರು, ಈ ಹಿಂದೆ ಸ್ಪೀಕರ್ ಬದಲಾಯಿಸಿರುವುದಾಗಿ ಕರೆ ಮಾಡಿ ತಿಳಿಸಲಾಗಿದೆ. ಇದೀಗ ವಾರಂಟಿ ಬಳಕೆ ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನಲಾಗುತ್ತಿದೆ ಎಂದು ತಿಳಿಸಿ ಮೊಬೈಲ್‌ನ್ನು ಸರ್ವಿಸ್ ಸೆಂಟರ್‌ನವರಿಗೆ ಹಿಂದಿರುಗಿಸಿದ್ದರು.
ಇದಾದ ಬಳಿಕ ಮೊಬೈಲ್ ಕಂಪನಿಯೊಂದಿಗೆ ಹಲವು ಬಾರಿ ಸಂಪರ್ಕಿಸಿದರೂ ಪ್ರತಿಕ್ರಿಯೆ ಬಂದಿರಲಿಲ್ಲ. ಲೀಗಲ್ ನೋಟಿಸ್ ನೀಡಿದ್ದರೂ ಉತ್ತರ ನೀಡಿರಲಿಲ್ಲ. ಪರಿಣಾಮವಾಗಿ ಗ್ರಾಹಕರ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು. ಮೊಬೈಲ್‌ಗೆ ಪಾವತಿ ಮಾಡಿರುವ ಹಣ ಹಿಂದಿರುಗಿಸುವುದು ಅಥವಾ ಹೊಸ ಪೋನ್ ನೀಡುವಂತೆ ಸೂಚನೆ ನೀಡಬೇಕು. ಜೊತೆಗೆ ಸೇವಾ ನ್ಯೂನತೆ ಕಾರಣದಿಂದ 2 ಲಕ್ಷ ರೂಪಾಯಿಗಳನ್ನು ಪರಿಹಾರ ನೀಡುವಂತೆ ಸೂಚನೆ ನೀಡಬೇಕು ಎಂದು ದೂರಿನಲ್ಲಿ ಕೋರಿದ್ದರು.
ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸಿದ್ದ ಮೊಬೈಲ್ ಸಂಸ್ಥೆ ಪರ ವಕೀಲರು, ಫೋನ್ ಅನ್ನು ಸರ್ವೀಸ್ ಕೇಂದ್ರದವರು ಪರೀಕ್ಷೆ ಮಾಡಿ ಸ್ಪೀಕರ್ ಬದಲಾಯಿಸಿದ್ದಾರೆ. ಬಳಿಕ ಆಪೆಲ್ ಕೇಂದ್ರಕ್ಕೆ ರವಾನಿಸಿ ಪರೀಕ್ಷೆಗೊಳಪಡಿಸಿ ಕೆಲ ಬದಲಾವಣೆಗಳು ಮಾಡಲಾಗಿದೆ. ಅಲ್ಲದೇ, ಆಕಸ್ಮಿಕ ಹಾನಿ ಮತ್ತು ಅನಧಿಕೃತ ಬದಲಾವಣೆಗಳಿಗೆ ವಾರಂಟಿ ನೀಡುವುದಿಲ್ಲ. ಇದೇ ಕಾರಣಕ್ಕಾಗಿ ವಾರಂಟಿ ಆಧಾರದಲ್ಲಿ ಪೋನ್ ಸರಿಪಡಿಸುವುದಕ್ಕೆ ಸಾಧ್ಯವಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಆದ್ದರಿಂದ ಪ್ರತಿವಾದಿಗಳಿಂದ ಯಾವುದೇ ರೀತಿಯ ಸೇವಾ ನ್ಯೂನ್ಯತೆ ಉಂಟಾಗಿಲ್ಲ. ಆದ ಕಾರಣ ದೂರನ್ನು ರದ್ದು ಮಾಡಬೇಕು ಎಂದು ಮನವಿ ಮಾಡಿದ್ದರು.
ವಾದ-ಪ್ರತಿವಾದ ಆಲಿಸಿದ ಪೀಠ, ಸರ್ವೀಸ್ ಕೇಂದ್ರದವರು ಮೊದಲ ಬಾರಿಯೇ ಧೂಳು ಮತ್ತು ಅಂಟು ಇರುವುದನ್ನು ಗಮನಿಸಿ ದೂರುದಾರರಿಗೆ ತಿಳಿಸಿ ವಾರಂಟಿಯಲ್ಲಿ ಸರಿಪಡಿಸಲಾಗದು ಎಂದು ತಿಳಿಸಬಹುದಿತ್ತು. ಆದರೆ, ಒಮ್ಮೆ ಸರಿಪಡಿಸಲಾಗಿದೆ ಎಂದು ತಿಳಿಸಿದ ಬಳಿಕ ಮತ್ತೆ ಸಮಸ್ಯೆಯ ಕುರಿತು ವಿವರಿಸಿದ್ದಾರೆ. ಜೊತೆಗೆ ಅವರ ತಪ್ಪನ್ನು ಮುಚ್ಚಿ ಹಾಕಿಕೊಳ್ಳಲು ದೂರುದಾರರ ಮೇಲೆ ಹೊರೆ ವರ್ಗಾಯಿಸಲು ಪ್ರಯತ್ನ ಮಾಡಿದ್ದಾರೆ. ಇದು ಕಾನೂನು ಬಾಹಿರವಾದ ವ್ಯವಹಾರವಾಗಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.