ಮಂಗಳೂರು: ಜಗತ್ತನ್ನೇ ಕಾಡುತ್ತಿರುವ ಕೊರೊನಾ ಸೋಂಕು ಸಂಪೂರ್ಣ ನಿರ್ಮೂಲನೆಯಾಗಿ, ಲೋಕ ಸುಭೀಕ್ಷದಿಂದಿರಲು ಶತಾಯುಷಿಯೋರ್ವರು ಚತುಃ ಸಂಹಿತಾ ಯಾಗವನ್ನು ನಗರದ ಹಳೆಯಂಗಡಿ ಸಮೀಪದ ಪಕ್ಷಿಕೆರೆ ಎಂಬಲ್ಲಿನ ಸ್ವಗೃಹದಲ್ಲಿಯೇ ಆರಂಭಿಸಿದ್ದಾರೆ.
ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಪೂರ್ವಾಶ್ರಮದ ತಂದೆಯವರೂ, ಚತುರ್ವೇದ ಪಾರಂಗತರೂ ಆಗಿರುವ 102 ವರ್ಷ ವಯಸ್ಸಿನ ಅಂಗಡಿಮಾರು ಕೃಷ್ಣ ಭಟ್ಟರು ಮುತುವರ್ಜಿಯಿಂದ ಈ ಚತುಃ ಸಂಹಿತಾಯಾಗ ಸಾಂಗೋಪವಾಗಿ ಸಾಗುತ್ತಿದೆ. ಪರಮಸಾತ್ವಿಕ ಶತಾಯುಷಿಯವರಾದ ಕೃಷ್ಣಭಟ್ಟರು ಜಗತ್ತಿನ ಕ್ಷೇಮಕ್ಕಾಗಿ ಬಹಳ ಶ್ರದ್ಧೆ, ಪರಿಶ್ರಮದಿಂದ ಈ ವೇದೋಕ್ತ ಯಾಗವನ್ನು ನಡೆಸುವ ಸಂಕಲ್ಪ ಕೈಗೊಂಡಿದ್ದಾರೆ. ಈ ಪ್ರಾಯದಲ್ಲೂ ಮುಖ್ಯ ಯಾಜ್ಞಿಕರಾಗಿ ಸ್ವತಃ ತಾವೇ ಮುಂದೆ ನಿಂತು ವಿದ್ವಾಂಸರಾದ ತಮ್ಮ ಪುತ್ರರು ಹಾಗೂ ಇನ್ನಿತರ 7-8 ಋತ್ವಿಜರ ನೆರವಿನಿಂದ ಈ ಯಾಗವನ್ನು ಮುನ್ನಡೆಸುತ್ತಿದ್ದಾರೆ.
ಈಗಾಗಲೇ ಋಕ್(ಋಗ್ವೇದ), ಯಜು(ಯಜುರ್ವೇದ) ಯಾಗಗಳು ಸಂಪೂರ್ಣಗೊಂಡಿದ್ದು, ಭಾನುವಾರದಿಂದ ಸಾಮ ಸಂಹಿತಾಯಾಗವನ್ನು ಆರಂಭಿಸಿದ್ದಾರೆ. ಸಂಗೀತವೇ ಪ್ರಧಾನ ಅಂಶವಾಗಿ ಉಳ್ಳ ಸಾಮವೇದವನ್ನು ಗಾನರೂಪದಲ್ಲಿ ಪಠಣ ಮಾಡಲಾಗುತ್ತದೆ. ಅಲ್ಲದೆ 1198 ಅಪೂರ್ವ ಮಂತ್ರಗಳಿರುವ ಕಾರಣ ದಿನಕ್ಕೆ 200 ಮಂತ್ರಗಳ ಆಹುತಿಯನ್ನು ಯಜ್ಞ ಮುಖೇನ ಅರ್ಪಿಸಲಾಗುತ್ತದೆ. ಆದ್ದರಿಂದ ಈ ಯಾಗವು 5-6 ದಿನಗಳ ಕಾಲ ನಡೆಯಲಿದೆ. ಅದೇ ರೀತಿ ಈ ಹಿಂದೆ ನಡೆದ 10 ಸಾವಿರದಷ್ಟು ಮಂತ್ರಗಳಿರುವ ಋಗ್ವೇದ ಸಂಹಿತಾಯಾಗವು, ಗದ್ಯರೂಪಕವಾದ ಯಜುಸಂಹಿತಾ ಯಾಗವು ಸಾಕಷ್ಟು ದಿನಗಳ ಕಾಲ ನಡೆದಿತ್ತು. ಮುಂದೆ ನಡೆಯುವ ಅಥರ್ವ ವೇದವೂ ಹಲವು ದಿನಗಳ ಕಾಲ ನಡೆದು ಪೂರ್ಣಾಹುತಿಯಾಗಲಿದೆ.
ಲಾಕ್ಡೌನ್ ಇರುವ ಕಾರಣ ಯಾವುದೇ ಆಡಂಬರಗಳಿಲ್ಲದೆ, ಸರ್ಕಾರದ ನಿಯಮಾವಳಿಗಳನ್ನು ಪಾಲಿಸಿಕೊಂಡು ಸೀಮಿತ ಯಾಜ್ಞಿಕರ ನೆರವಿನ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಿ ಈ ಚತುಃಸಂಹಿತಾ ಯಾಗವನ್ನು ನಡೆಸಲಾಗುತ್ತಿದೆ. ಅಲ್ಲದೆ ಮನೋಭಿಲಾಷೆಯನ್ನು ಈಡೇರಿಸುವ ಶಕ್ತಿಯಿರುವ ಪಾಲಾಶ ಮರದ ಸಮಿತ್ತುಗಳನ್ನೇ ಯಾಗಕ್ಕೆ ಬಳಸಲಾಗುತ್ತಿದೆ. ಈ ಸಮಿತ್ತುಗಳನ್ನು ಅಂಗಡಿಗಳಿಂದ ಖರೀದಿಸದೇ, ಮನೆಯವರೇ ಸಂಗ್ರಹಿಸಿ ಯಾಗವನ್ನು ಮಾಡುತ್ತಿರುವುದು ಇಲ್ಲಿನ ಮತ್ತೊಂದು ವಿಶೇಷ.
ಒಟ್ಟಿನಲ್ಲಿ ಈ ಪ್ರಾಯದಲ್ಲೂ ಲೋಕಕ್ಷೇಮಕ್ಕಾಗಿ ಇಂತಹ ಬೃಹತ್ ಯಾಗವನ್ನು ಕೈಗೊಂಡಿರುವುದು ಅಂಗಡಿಮಾರು ಕೃಷ್ಣ ಭಟ್ಟರ ಕಾರ್ಯ ನಿಜವಾಗಿಯೂ ಲೋಕಪರವಾದದ್ದು. ಅಲ್ಲದೆ ಎಲ್ಲೂ ಪ್ರಚಾರ ಬಯಸದೆ ಸದ್ದಿಲ್ಲದೆ ಈ ಯಾಗವನ್ನು ಕೈಗೊಂಡಿರುವುದು ಅವರ ಪರಮಸಾತ್ವಿಕತೆಗೊಂದು ಕೈಗನ್ನಡಿ.