ಬೆಂಗಳೂರು: ಕಾಂಗ್ರೆಸ್ ಮುಖಂಡ ಅಲ್ತಾಫ್ ಖಾನ್ ದಾಳಿಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಭಾನುವಾರ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಈ ಪ್ರಕರಣ ಬೂದಿ ಮುಚ್ಚಿದ ಕೆಂಡದಂತಿದ್ದು, ದೂರು ನೀಡುವ ಬಗ್ಗೆ ನಂತರ ಯೋಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಪ್ರಕರಣದ ಬಗ್ಗೆ ಮಾತನಾಡಿರುವ ಅಲ್ತಾಫ್ ಖಾನ್, ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ನಮ್ ತಾಯಿ ಮನೆ ಬಳಿ ಒಂದು ಆಟೋ ಬಂದಿತ್ತು. ಅದರಲ್ಲಿದ್ದವರು ಯಾರೂ ಕಾಣಿಸ್ಲಿಲ್ಲ. ಬನ್ನಿ ಮತ್ತೊಮ್ಮೆ ಹೋಗೋಣ ಅಂತಾ ಮಾತನಾಡಿಕೊಂಡಿದ್ದಾರೆ. ಅದನ್ನು ನೋಡಿದ ನಮ್ಮ ಜನ ನನಗೆ ಫೋನ್ ಮಾಡಿ ಬಂದವರ ಬಳಿ ಬ್ಲೇಡ್, ಡ್ರ್ಯಾಗರ್ ಸೇರಿದಂತೆ ಕೆಲವೊಂದು ಮಾರಕಾಸ್ತ್ರಗಳು ಇವೆ ಅಂತಾ ಹೇಳಿದರು. ತಕ್ಷಣ ನಾನು ಅವ್ರನ್ನ ಪೊಲೀಸರಿಗೆ ಒಪ್ಪಿಸಿದೆ ಎಂದು ಆ ಕ್ಷಣದಲ್ಲಿ ನಡೆದ ಘಟನೆಯನ್ನು ವಿವರಿಸಿದರು.
ಗಾಂಜಾ ತರಲು ಬಂದ್ರಾ ಆರೋಪಿಗಳು?: ಪೊಲೀಸರ ತನಿಖೆ ವೇಳೆ ಆರೋಪಿಗಳು ಗಾಂಜಾ ತರೋದಕ್ಕೆ ಬಂದಿದ್ದೀವಿ ಅಂದಿದ್ದಾರಂತೆ. ಆದ್ರೆ, 30 ವರ್ಷಗಳ ಹಿಂದೆ ಗಾಂಜಾ ಮಾರೋಕೆ ಒಬ್ಬ ಪೈಲ್ವಾನ್ ಇದ್ದ, ಈಗ ಆತ ಇಲ್ಲ. ನಮ್ಮ ಏರಿಯಾದಲ್ಲಿ ಗಾಂಜಾ ಸಿಕ್ಕಲ್ಲ. ಅಂಥದ್ರಲ್ಲಿ ಇವರು ಯಾಕೆ ಬಂದಿದ್ದಾರೆ ಅನ್ನೋದು ನನಗೆ ಗೊತ್ತಾಗುತ್ತಿಲ್ಲ ಎಂದು ಅಲ್ತಾಫ್ ಹೇಳಿದರು.
ನನಗೆ ತುಂಬಾ ಜನ ಶತೃಗಳಿದ್ದಾರೆ.. ಇನ್ನು, ಈ ಪ್ರಕರಣ ಒಂಥರಾ ಬೂದಿ ಮುಚ್ಚಿದ ಕೆಂಡದಂತಿದೆ. ರಾಜಕೀಯವಾಗಿ ಮಾತ್ರವಲ್ಲದೇ ತುಂಬಾ ಜನ ನನಗೆ ಶತೃಗಳಿದ್ದಾರೆ. ಸದ್ಯ ಪೊಲೀಸರು ತನಿಖೆಯನ್ನು ನಡೆಸ್ತಿದಾರೆ. ಅವರು ಏನು ಹೇಳುತ್ತಾರೆ ಎಂಬುದನ್ನು ನೋಡಿಕೊಂಡು ನಂತರ ದೂರು ಕೊಡುವ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಅಲ್ತಾಫ್ ಖಾನ್ ಮಾಧ್ಯಮದವರ ಎದುರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೈ ಮುಖಂಡನ ಮೇಲೆ ದಾಳಿ ಯತ್ನ: ಮೂವರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು
ಸ್ಥಳೀಯರೇ ಹಿಡಿದು ಪೊಲೀಸರಿಗೊಪ್ಪಿಸಿದರು.. ಶನಿವಾರ ರಾತ್ರಿ ಅಲ್ತಾಫ್ ಖಾನ್ ಮೇಲೆ ಹಲ್ಲೆ ಮಾಡಲು ಮಾರಕಾಸ್ತ್ರಗಳೊಂದಿಗೆ ಸಜ್ಜಾಗಿ ಮೂವರು ಯುವಕರು ಬಂದಿದ್ದರು ಎನ್ನಲಾಗ್ತಿದೆ. ಇವರನ್ನು ಸ್ಥಳಿಯರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ಹಿನ್ನೆಲೆ: ಶನಿವಾರ ರಾತ್ರಿ 10 ಗಂಟೆಯ ಸುಮಾರಿಗೆ ಜೆ ಜೆ ನಗರ ಠಾಣಾ ವ್ಯಾಪ್ತಿಯಲ್ಲಿರುವ ಕಾಂಗ್ರೆಸ್ ಮುಖಂಡ ಅಲ್ತಾಫ್ ಖಾನ್ ಅವರ ಮನೆ ಬಳಿ ಚಾಕು, ಬ್ಲೇಡ್ಗಳೊಂದಿಗೆ ಆಟೋದಲ್ಲಿ ಬಂದಿದ್ದ ನಾಲ್ವರು, ಹೊಂಚು ಹಾಕಿ ಕುಳಿತಿದ್ದರು. ಬಳಿಕ 'ಅಲ್ತಾಫ್ ಮನೆಯಿಂದ ಹೊರ ಬರ್ಲಿಲ್ಲ, ಬಚಾವ್ ಆದ' ಎಂದು ಮಾತನಾಡಿಕೊಳ್ಳುತ್ತಿದ್ದರಂತೆ. ದುಷ್ಕರ್ಮಿಗಳು ಆ ಮಾತನ್ನು ಆಡಿದ ಬಳಿಕ ಸ್ಥಳೀಯರಿಗೆ ಇವರ ಬಗ್ಗೆ ಗೊತ್ತಾಗಿದೆ. ಆಗ ಅವರು ಆಟೋದಲ್ಲಿ ಪರಾರಿಯಾಗುತ್ತಿದ್ದರು. ಇದೇ ಸಂದರ್ಭದಲ್ಲಿ ಕಿರಾತಕರ ಆಟೋ ಬೆನ್ನಟ್ಟಿದ ಸ್ಥಳೀಯರು ಮೂವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.