ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ಸದ್ಯ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾಟನ್ ಪೇಟೆಯಲ್ಲಿ ಸಿಸಿಬಿ ಎಸಿಪಿ ಗೌತಮ್ ನೀಡಿರುವ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ.
ಎಸಿಪಿ ಗೌತಮ್ ಕೂಡ ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖಾಧಿಕಾರಿಯಾಗಿದ್ದು, ರಾಗಿಣಿ ವಿರುದ್ಧ ಒಳಸಂಚು ಹಾಗೂ ಸಾಕ್ಷ್ಯ ನಾಶ ಮಾಡಿರುವ ಆರೋಪದಡಿ ದೂರು ದಾಖಲಿಸಿದ್ದಾರೆ. ಸದ್ಯ ಕಾಟನ್ ಪೇಟೆ ಠಾಣೆಯಲ್ಲಿ ರಾಗಿಣಿ ವಿರುದ್ಧ ಎನ್ಡಿಪಿಎಸ್ ಕಾಯ್ದೆ 21, 21c, 27_A,_27b,29ರ ಅಡಿ ಪ್ರಕರಣ ದಾಖಲಾಗಿದೆ.
ಮತ್ತೊಂದೆಡೆ ಎನ್ಡಿಪಿಎಸ್ ಕಾಯ್ದೆ ಅಡಿ ರಾಗಿಣಿ ಮೇಲೆ ಪ್ರಕರಣ ದಾಖಲಾದ ಕಾರಣ ಜಾಮೀನು ಸಿಗುವುದು ಕಷ್ಟವಾಗಿದೆ. ಯಾಕಂದ್ರೆ ಮಾದಕ ವಸ್ತು ಮಾರಾಟ, ತಯಾರಿಕೆ ಮತ್ತು ಸೇವನೆ ಅಪರಾಧವಾಗಿದೆ. ಗರಿಷ್ಠ 6 ತಿಂಗಳು ಜೈಲು ಶಿಕ್ಷೆ, 10 ಸಾವಿರ ದಂಡ, ದೊಡ್ಡ ಪ್ರಮಾಣವಾದರೆ 10 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ಹಾಕಲಾಗುತ್ತದೆ.
ಮತ್ತೊಂದೆಡೆ 2008ರ ಡ್ರಗ್ಸ್ ಕೇಸ್ ಸಿಸಿಬಿಗೆ ವರ್ಗಾವಣೆಯಾಗಿದ್ದು, ಸದ್ಯ ಇದರ ಬಗ್ಗೆ ಕೂಡ ಸಿಸಿಬಿ ಅಧಿಕಾರಿಗಳು ಇಂದಿನಿಂದ ಅಧಿಕೃತವಾಗಿ ತನಿಖೆ ನಡೆಸಲಿದ್ದಾರೆ. 2008ರ ಡ್ರಗ್ಸ್ ಕೇಸ್ಗೆ ಸಂಬಂಧಪಟ್ಟಂತೆ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದರಲ್ಲಿ ಇಬ್ಬರು ನೈಜೀರಿಯಾ ಪ್ರಜೆಗಳು ಹಾಗೂ ಪ್ರತಿಕ್ ಶೆಟ್ಟಿ ಆರೋಪಿಗಳಾಗಿದ್ದರು. ಆರೋಪಿ ಪ್ರತೀಕ್ ಶೆಟ್ಟಿ ವಿಚಾರಣೆ ನಡೆಸಿದಾಗ ರಾಗಿಣಿ ಹೆಸರು ಸಹ ಕೇಳಿ ಬಂದರೂ ಕೂಡ ಸರಿಯಾದ ಸಾಕ್ಷಿ ಸಿಕ್ಕಿರಲಿಲ್ಲ. ಸದ್ಯ ಇದೀಗ 2008ರ ಪ್ರಕರಣ ಮತ್ತೆ ಮರುಜೀವ ಪಡೆದಿದೆ.