ಬೆಂಗಳೂರು: ಕೌಟುಂಬಿಕ ಕಲಹದಿಂದ ಕುಟುಂಬ ಸದಸ್ಯರನ್ನು ದೂರಮಾಡಿಕೊಂಡು ಮಾನಸಿಕ ಅಸ್ವಸ್ಥನಾಗಿದ್ದ ವಿದೇಶಿ ಪ್ರಜೆಗೆ ಸಂಪಂಗಿರಾಮ ನಗರ ಪೊಲೀಸರು ವೀಸಾ, ಪಾಸ್‌ಪೋರ್ಟ್ ಕೊಡಿಸಿ ಆತನನ್ನು ತನ್ನ ದೇಶಕ್ಕೆ ಕಳುಹಿಸಿದ್ದಾರೆ.
ಜರ್ಮನಿ ಮೂಲದ 47 ವರ್ಷದ ರೋರ್ಡಿಗೊ ಅನ್ಫಟ್ ಎಂಬುವರು 2019 ನವೆಂಬರ್‌ನಿಂದ 2020 ನವೆಂಬರ್ ಅವಧಿವರೆಗೆ ಪ್ರವಾಸಿ ವೀಸಾ ಪಡೆದು ಕುಟುಂಬ ಸಮೇತ ಭಾರತಕ್ಕೆ ಬಂದಿದ್ದರು. ಈ ಮಧ್ಯೆ ಕೌಟುಂಬಿಕ ಸಮಸ್ಯೆಯಿಂದ ಸ್ನೇಹಿತೆ ಹಾಗೂ ಕುಟುಂಬ ಸದಸ್ಯರು ರೋರ್ಡಿಗೊ ಬಿಟ್ಟು ತಮ್ಮ ದೇಶಕ್ಕೆ ತೆರಳಿದ್ದರು. ಇದರಿಂದ ಮಾನಸಿಕ ತೊಂದರೆಗೊಳಗಾದ ರೋರ್ಡಿಗೊ ನಗರದಲ್ಲಿ ಅಲೆದಾಡಿ, ನಿರಾಶ್ರಿತ ಪ್ರದೇಶಗಳಲ್ಲಿ ಮಲಗಿ ಜೀವನ ಕಳೆಯುತ್ತಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಜರ್ಮನಿ ರಾಯಭಾರಿ ಕಚೇರಿಯ ಅಧಿಕಾರಿಗಳು ಎಲ್ಲೆಡೆ ಹುಡುಕಾಟ ನಡೆಸಿ ಮಾರ್ಚ್‌ನಲ್ಲಿ ರೋರ್ಡಿಗೊನನ್ನು ಪತ್ತೆ ಹಚ್ಚಿ ಜರ್ಮನಿ ಕಳುಹಿಸಲು ವ್ಯವಸ್ಥೆ ಮಾಡಿದ್ದು, ವಿಮಾನ ನಿಲ್ದಾಣಕ್ಕೂ ಕಳುಹಿಸಿದ್ದರು. ಆದರೆ, ಅಲ್ಲಿನ ಪೊಲೀಸರ ಕಣ್ಣು ತಪ್ಪಿಸಿ ರೋರ್ಡಿಗೊ ತಪ್ಪಿಸಿಕೊಂಡು ಬಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಣ ದರೋಡೆ ಯತ್ನಿಸಿದಾಗ ಪತ್ತೆ: ಆ ನಂತರ ಸಂಪಂಗಿರಾಮ ನಗರ ಠಾಣಾ ವ್ಯಾಪ್ತಿಯ ಆರ್ ಆರ್ ಎಂ ಹೋಟೆಲ್ ಬಳಿ ಕಳ್ಳನೊಬ್ಬ ರೋರ್ಡಿಗೊನಿಂದ ಹಣ ದರೋಡೆಗೆ ಮುಂದಾಗಿದ್ದ. ಆಗ ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋದ ಪಿಎಸ್ಐ ಬಸವರಾಜ ತಾಳಿಕೋಟಿ ಮತ್ತು ಸಿಬ್ಬಂದಿ ಕಳ್ಳನನ್ನು ಹಿಡಿದು ರೋರ್ಡಿಗೊನನ್ನು ರಕ್ಷಿಸಿದ್ದಾರೆ. ಬಳಿಕ ಆತನನ್ನು ವಿಚಾರಿಸಿದಾಗ ಪೊಲೀಸರ ಜತೆಗೆ ವಾಗ್ವಾದ ನಡೆಸಿದ್ದ. ಆತ ಮಾನಸಿಕ ಅಸ್ವಸ್ಥ ಎಂದು ತಿಳಿಯುತ್ತಿದ್ದಂತೆ ಆತನ ಬಳಿಯಿದ್ದ ಪಾಸ್ ಪೋರ್ಟ್, ವೀಸಾ ಪಡೆದು ಪರಿಶೀಲಿಸಿದಾಗ ಜರ್ಮನಿ ಮೂಲದವನು ಎಂದು ಗೊತ್ತಾಗಿದೆ. ಬಳಿಕ ಜರ್ಮನಿ ರಾಯಭಾರಿ ಕಚೇರಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಲಾಯಿತು. ಅವರ ಸಲಹೆ ಮೇರೆಗೆ ರೋರ್ಡಿಗೊನನ್ನು ನಿಮ್ಹಾನ್ಸ್ ನಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು.
ಮತ್ತೊಂದೆಡೆ ಆತನ ಕುಟುಂಬ ಸದಸ್ಯರನ್ನೂ ಸಂಪರ್ಕಿಸಿ ವಿಚಾರ ತಿಳಿಸಲಾಯಿತು. ಕುಟುಂಬದವರು ರಾಯಭಾರಿ ಕಚೇರಿ ಅಧಿಕಾರಿಗಳನ್ನು ಸಂಪರ್ಕಸಿ ವಿಮಾನ ಟಿಕೆಟ್ ಕಳುಹಿಸಿದ್ದಾರೆ. ಅದುವರೆಗೂ ರೋರ್ಡಿಗೊಗೆ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಿ, ಊಟ ಉಪಚಾರ ಮಾಡಲಾಯಿತು. ಬಳಿಕ ಮೇ 4ರಂದು ಮುಂಜಾನೆ ಮೂರು ಗಂಟೆ ಸುಮಾರಿಗೆ ಬೋರ್ಡಿಂಗ್ ಪಾಸ್ ಪಡೆದು ವಿಮಾನದ ಮೂಲದ ಕಳುಹಿಸಲಾಯಿತು ಎಂದು ಎಸ್.ಆರ್.ನಗರ ಪೊಲೀಸರು ಮಾಹಿತಿ ನೀಡಿದರು.