ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೇಖ್ರಿ ವೃತ್ತದಿಂದ ಕಾವೇರಿ ಜಂಕ್ಷನ್ವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ಶೇ.95ರಷ್ಟು ಮುಗಿದಿದೆ ಎಂದು ಬೆಂಗಳೂರು ಮಹಾನಗರ ಪಾಲಿಕೆಯು ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಮೇಖ್ರಿ ವೃತ್ತದಿಂದ ಕಾವೇರಿ ಜಂಕ್ಷನ್ ವರೆಗೂ ರಸ್ತೆ ಅಗಲೀಕರಣಕ್ಕೆ ಕೋರ್ಟ್ ಸೂಚನೆ ನೀಡಿದ್ದರೂ, ಕ್ರಮಕ್ಕೆ ಮುಂದಾಗದ ಬಿಬಿಎಂಪಿ ಕ್ರಮವನ್ನು ಪ್ರಶ್ನಿಸಿ ಬೆಂಗಳೂರಿನ ಸಮರ್ಪಣಾ ಸಾಂಸ್ಕೃತಿಕ ಮತ್ತು ಸೇವಾ ಸಂಘ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ನ್ಯಾಯಪೀಠಕ್ಕೆ ಬಿಬಿಎಂಪಿ ಪ್ರಮಾಣ ಪತ್ರ ಸಲ್ಲಿಸಿದೆ.
ರಸ್ತೆ ಅಗಲೀಕರಣ ಕಾಮಗಾರಿ ಶೇ.95 ರಷ್ಟು ಪೂರ್ಣಗೊಂಡಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಿದೆ. ಈ ಅಂಶವನ್ನು ದಾಖಲಿಸಿಕೊಂಡಿರುವ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿದೆ.
ಇದನ್ನೂ ಓದಿ: ಬೆಂಗಳೂರು ಮೈಸೂರು ಟೋಲ್ ಗೊಂದಲ, ಆಕ್ಷೇಪಣೆ ಸಲ್ಲಿಸಲು ಎನ್ಎಚ್ಎಐಗೆ ಹೈಕೋರ್ಟ್ ಸೂಚನೆ
ಪ್ರಮಾಣ ಪತ್ರದಲ್ಲೇನಿದೆ?: ಬಿಬಿಎಂಪಿಯ ರಸ್ತೆ ಮೂಲಸೌಕರ್ಯ (ಪಶ್ಚಿಮ) ವಿಭಾಗದ ಕಾರ್ಯನಿರ್ವಾಹಕ ಎಂಜಿರ್ ಎಚ್.ಎಸ್.ಪ್ರಿಯದರ್ಶಿನಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಈ ಹಿಂದೆ 2023ರ ಜ.20ರಂದು ಸಲ್ಲಿಸಿದ್ದ ಪ್ರಮಾಣ ಪತ್ರದ ಮುಂದುವರಿದ ಭಾಗವಾಗಿ ಈ ಪ್ರಮಾಣ ಪತ್ರ ಸಲ್ಲಿಸಲಾಗುತ್ತಿದೆ. ಎಲ್ಲ ರೀತಿಯಲ್ಲೂ ಶೇ.95ರಷ್ಟು ಕಾಮಗಾರಿ ಪೂರ್ಣಗೊಳಿಸಿ ಆ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಗುವಿನ ಬೆಳವಣಿಗೆಗೆ ತಾತ ಅಜ್ಜಿಯ ಪ್ರೀತಿ ಅತ್ಯಗತ್ಯ, ಒಬ್ಬಂಟಿ ತಂದೆಯಿಂದ ಅದು ಸಿಗಲ್ಲ: ಹೈಕೋರ್ಟ್ ಅಭಿಪ್ರಾಯ
ಅಲ್ಲದೆ, ರಸ್ತೆಯ ಒಂದು ಭಾಗದಲ್ಲಿ ಡಾಂಬರೀಕರಣ ಕಾರ್ಯ ಪೂರ್ಣಗೊಂಡಿದೆ. ಸದ್ಯ ಆ ರಸ್ತೆಯಲ್ಲಿ ವಾಹನಗಳು ಯಾವುದೇ ಅಡೆತಡೆ ಇಲ್ಲದೆ ಸಾಗುತ್ತಿವೆ ಎಂದು ಅವರು ಪ್ರಮಾಣ ಪತ್ರದಲ್ಲಿ ವಿವರಿಸಿದ್ದಾರೆ. ರಸ್ತೆಯ ಬಲ ಭಾಗದಲ್ಲಿ ಎಸ್ ಡಬ್ಲೂಡಿ ಚೇಂಬರ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕಿದೆ. ಆ ಕಾಮಗಾರಿ ಪ್ರಗತಿಯಲ್ಲಿದೆ. ಆದು ಪೂರ್ಣಗೊಂಡ ಬಳಿಕ ರಸ್ತೆ ಮೀಡಿಯನ್ ಅನ್ನು ಹಾಲಿ ಇರುವ ಜಾಗದಿಂದ ತೆರವುಗೊಳಿಸಿ ರಸ್ತೆಯ ಮಧ್ಯದಲ್ಲಿ ಹಾಕಲಾಗುವುದು. ಕಾಮಗಾರಿಯ ಪ್ರಗತಿಯ ವಿವರಗಳನ್ನು ಕಾಲ ಕಾಲಕ್ಕೆ ನ್ಯಾಯಪೀಠಕ್ಕೆ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಲ್ಲತ್ತಳ್ಳಿ ಕೆರೆಯಲ್ಲಿ ಯಾವುದೇ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು : ಹೈಕೋರ್ಟ್