ಬೆಂಗಳೂರು: ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ.. ದೇಶವನ್ನೇ ಬೆಚ್ಚಿ ಬೀಳಿಸಿದ್ದ ಜಮತರಾ ಗ್ಯಾಂಗ್ ಕಣ್ಣು ಈಗ ರಾಜಧಾನಿ ಮೇಲೆ ಬಿದ್ದಂತಿದೆ. ಸ್ವಲ್ಪ ಯಾಮಾರಿದ್ರು ಕ್ಷಣ ಮಾತ್ರದಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ನಿಂದ ಹಣವನ್ನು ಇನ್ಯಾರೋ ಖರ್ಚು ಮಾಡಿಬಿಡ್ತಾರೆ.
ಹೌದು, ದೇಶವನ್ನೇ ಬೆಚ್ಚಿ ಬೀಳಿಸಿದ್ದ ಜಮತರಾ ಸೈಬರ್ ಕಳ್ಳರ ಗ್ಯಾಂಗ್ ಕಣ್ಣು ಈಗ ರಾಜಧಾನಿ ಬೆಂಗಳೂರಿನ ಮೇಲೆ ಬಿದ್ದಂತಿದೆ. ಎಲ್ಲೋ ದೂರದ ಜಾರ್ಖಂಡ್ ನಲ್ಲಿ ಕುಳಿತು ಇಲ್ಲಿ ನಿಮ್ಮ ಹಣವನ್ನ ಎಗರಿಸುವ ಈ ಗ್ಯಾಂಗ್ ಕಣ್ಣು ಸದ್ಯ ಬೆಂಗಳೂರಿನ ಮೇಲೆ ಬಿದ್ದಂತಿದೆ. ನಗರದಲ್ಲಿ ಕಳೆದ 15 ದಿನಗಳಲ್ಲಿ 85 ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣಗಳು ನಗರದ ಎಲ್ಲಾ ವಿಭಾಗಗಳ ಸಿಇಎನ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.
ಇತ್ತೀಚಿಗೆ ಕ್ರೆಡಿಟ್ ಕಾರ್ಡ್ ಬಳಕೆದಾರರನ್ನ ಟಾರ್ಗೆಟ್ ಮಾಡಿರುವ ಗ್ಯಾಂಗ್ವೊಂದು ವಿವಿಧ ರೀತಿ ಸೈಬರ್ ವಂಚನೆ ಮಾಡುತ್ತಿದೆ. ಕ್ರೆಡಿಟ್ ಕಾರ್ಡ್ ಕಸ್ಟಮರ್ ಕೇರ್ ಸೋಗಿನಲ್ಲಿ ಕರೆ ಮಾಡುವ ಆರೋಪಿಗಳು ಕ್ರೆಡಿಟ್ ಲಿಮಿಟ್ ಜಾಸ್ತಿ ಮಾಡುವುದಾಗಿ ಹೇಳಿ ಒಟಿಪಿ ಪಡೆದುಕೊಂಡು ವಂಚನೆ ಮಾಡುತ್ತಿದ್ದಾರೆ. ಅಲ್ಲದೆ ಕೆಲವು ಕಡೆ ಕೆವೈಸಿ ಬಳಸಿಕೊಂಡು ಲೋನ್ಗಳನ್ನು ತೆಗೆದುಕೊಳುತ್ತಿದ್ದಾರೆ.
ಹೀಗೆ ಕಳೆದ 15 ದಿನಗಳಿಂದ ನಗರದಲ್ಲಿ ಬರೋಬ್ಬರಿ ಒಂದು ಕೋಟಿಗೂ ಅಧಿಕ ಮೌಲ್ಯದ ಹಣವನ್ನ ಈ ಸೈಬರ್ ವಂಚಕರು ದೋಚಿದ್ದಾರೆ. ಹೀಗೆ ದಾಖಲಾದ ಎಲ್ಲ ಪ್ರಕರಣಗಳಲ್ಲೂ ವಂಚಕರು ಉತ್ತರ ಭಾರತದ ಕಡೆಯಿಂದ ಕರೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ ಕುಖ್ಯಾತ ಜಮತರಾ ಗ್ಯಾಂಗ್ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ