ಬೆಂಗಳೂರು: ರಾಜ್ಯದಲ್ಲಿ ಯುಕೆ ನಂತರ ಇದೀಗ ದಕ್ಷಿಣ ಆಫ್ರಿಕಾ ವೈರಸ್ ಎಂಟ್ರಿ ಕೊಟ್ಟಿದೆ. ಸೌತ್ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.
ಇವರನ್ನು ಬೆಂಗಳೂರು ಏರ್‌ಪೋರ್ಟ್ ಬಳಿ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ. ಬಳಿಕ ಸ್ಯಾಂಪಲ್ ಅನ್ನು ನಿಮ್ಹಾನ್ಸ್ಗೆ ಕಳುಹಿಸಲಾಗಿತ್ತು. ಜೀನೋಮಿಕ್ ಸೀಕ್ವೆನ್ಸಿಂಗ್ನಲ್ಲಿ ಸೌತ್ ಆಫ್ರಿಕಾ ವೈರಸ್ ಪತ್ತೆಯಾಗಿದೆ. ಸೋಂಕಿತ ವ್ಯಕ್ತಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ಸದ್ಯ ಎಸಿಮ್ಟಮ್ಯಾಟಿಕ್ ಆಗಿದ್ದು, ಯಾವುದೇ ಸಮಸ್ಯೆ ಇಲ್ಲ ಅಂತ ತಿಳಿದು ಬಂದಿದೆ.
ರಾಜ್ಯದಲ್ಲಿ ಕಳೆದೊಂದು ವಾರದಿಂದ 500ರ ಗಡಿ ದಾಟಿರುವ ಸೋಂಕಿತರ ಸಂಖ್ಯೆ, ಇಂದು ಒಂದೇ ದಿನ 760 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 9,56,801 ಕ್ಕೆ ಏರಿಕೆ ಆಗಿದೆ.
6 ಸೋಂಕಿತರು ಮೃತರಾಗಿದ್ದು, ಇಲ್ಲಿಯವರೆಗೆ ಸಾವಿನ ಸಂಖ್ಯೆ 12,379ಕ್ಕೆ ಏರಿದೆ. 331 ಮಂದಿ ಗುಣಮುಖರಾಗಿದ್ದು, ಒಟ್ಟು 9,36,947 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಸದ್ಯ ಸಕ್ರಿಯ ಪ್ರಕರಣಗಳು 7,456 ಇದ್ದು 115 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತರ ಪ್ರಕರಣಗಳ ಶೇಕಡವಾರು 1.88 ರಷ್ಟಿದ್ದರೆ, ಮೃತಪಟ್ಟವರ ಪ್ರಮಾಣ 0.78% ರಷ್ಟಿದೆ. ಯುಕೆಯಿಂದ ಈವರೆಗೆ ಬಂದಿದ್ದ ಪ್ರಯಾಣಿಕರಲ್ಲಿ ಈವರೆಗೆ 64 ಜನಕ್ಕೆ ಪಾಸಿಟಿವ್ ಬಂದಿದ್ದು, ಈ ಸೋಂಕಿತರ ಸಂಪರ್ಕದಲ್ಲಿ 26 ಮಂದಿಗೂ ಕೊರೊನಾ ಸೋಂಕು ದೃಢಪಟ್ಟಿದೆ. 29 ಜನರಿಗೆ ರೂಪಾಂತರ ಕೊರೊನಾ ಹರಡಿದೆ.