ಬೆಂಗಳೂರು : ಕೋವಿಡ್ ಹಿನ್ನೆಲೆ ಎಲ್ಲೆಡೆ ಸರಳ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಲಾಗಿದೆ. ಅದರಂತೆ ಚಿತ್ರಕಲಾ ಪರಿಷತ್ತಿನಲ್ಲಿ ವಿಶೇಷವಾಗಿ 75ನೇ ಸ್ವಾತಂತ್ಯ್ರೋತ್ಸವದ ಅಂಗವಾಗಿ 75 ಕಲಾಕೃತಿಗಳನ್ನು ಪ್ರದರ್ಶನಕ್ಕಿರಿಸಲಾಗಿದೆ.
ನಗರದ ಚಿತ್ರಕಲಾ ಪರಿಷತ್ತಿನಲ್ಲಿ 75ರ ಸಂಭ್ರಮಕ್ಕೆ 75 ಕಲಾವಿದರು ರಚಿಸಿರುವ ಕಲಾಕೃತಿಗಳನ್ನು ಅನಾವರಣ ಮಾಡಲಾಗಿತ್ತು. ನೂರಾರು ಬಣ್ಣಗಳೊಂದಿಗೆ ಹತ್ತಾರು ಚಿಂತನೆಗಳನ್ನೊಳಗೊಂಡ ಕಲಾವಿದರ ಕುಂಚದಿಂದ ಕಲಾಕೃತಿಗಳು ಹೊರ ಹೊಮ್ಮಿದ್ದವು.
15 ದಿನಗಳ ಕಾಲ ನಡೆಯುವ ಪ್ರದರ್ಶನದಲ್ಲಿ ಪ್ರಸಿದ್ಧ ಕಲಾವಿದರಾದ ಬಿಕೆಎಸ್ ವರ್ಮಾ, ಶೆಣೈ, ವಾಸುದೇವ್, ಕೆ ಟಿ ಶಿವಪ್ರಸಾದ್ ಸೇರಿ ಅನೇಕರು ಭಾಗವಹಿಸಿದ್ದಾರೆ ಎಂದು ಸಿಕೆಪಿ ಅಧ್ಯಕ್ಷ ಬಿ ಎಲ್ ಶಂಕರ್ ತಿಳಿಸಿದರು.
ಬಳಿಕ ಹಿರಿಯ ನಟಿ ಜಯಶ್ರೀಯವರು ಮಾತನಾಡಿ, ಅನೇಕತೆಯಲ್ಲಿ ಏಕತೆ ಅರಿತು ಯುವಜನತೆ ಒಂದಾಗಬೇಕಿದೆ. ತಾಳ್ಮೆಯಿಂದ ಎಲ್ಲವನ್ನೂ ಹೊಸದಾಗಿ ಕಟ್ಟಬೇಕಿದೆ. ಈಗಾಗಲೇ ನಾವು ಕಟ್ಟಿದ್ದೇವೆ. ಆದರೆ, ಅದು ಕುಸಿಯುತ್ತಿದೆ. ಹೀಗಾಗಿ, ಯಾವುದೇ ಭೇದ-ಭಾವ ಇಲ್ಲದೆ ಯುವಕರು ಒಂದಾಗಿ ಜನಾಂಗವನ್ನು ಕಟ್ಟಬೇಕೆಂದು ಕಿವಿ ಮಾತು ಹೇಳಿದರು.
75ನೇ ವರ್ಷ ಸ್ವಾತಂತ್ಯ್ರೋತ್ಸವಕ್ಕೆ 75 ಪ್ರಸಿದ್ಧ ಕಲಾವಿದರ ಕಲಾಕೃತಿಗಳನ್ನು ಪರಿಷತ್ತಿನಲ್ಲಿ ಅನಾವರಣ ಮಾಡಿದ್ದಾರೆ. ಇದನ್ನು ಕಣ್ತುಂಬಿಕೊಂಡಿದ್ದು, ಖುಷಿಯಾಯ್ತು. ಇದು 75 ಜನರ ವ್ಯಕ್ತಿತ್ವವನ್ನು ತೋರಿಸುತ್ತಿದೆ ಎಂದರು.
ನಂತರ ನಟಿ ಭಾವನಾ ಮಾತನಾಡಿ, ಮೈಸೂರು ಶೈಲಿಯ ಕಲಾಕೃತಿಗಳು ತುಂಬಾ ಇಷ್ಟವಾಗುವುದರ ಜೊತೆಗೆ ಹೆಚ್ಚು ಆಕರ್ಷಿಸುತ್ತವೆ. ಸಾಕಷ್ಟು ಸಂಗ್ರಹಗಳು ನನ್ನ ಬಳಿ ಇವೆ. ಸ್ವಾತಂತ್ರ್ಯ ದಿನ ನಮ್ಮೆಲ್ಲರಿಗೂ ದೊಡ್ಡ ಹಬ್ಬ. ಇವತ್ತು ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವ ದಿನ.
ಎಲ್ಲೋ ಒಂದು ಕಡೆ ನಾವು ಪ್ರಜಾಪ್ರಭುತ್ವವನ್ನು ಕಳೆದುಕೊಳ್ಳುತ್ತಿದ್ದೇವೆ. ಹೀಗಾಗಿ, ಯುವಜನತೆಗೆ ಹೇಳುವುದೊಂದೇ ಪ್ರಜಾಪ್ರಭುತ್ವ ಕಾಪಾಡಿಕೊಳ್ಳುವುದು ನಮ್ಮಲ್ಲರ ಜವಾಬ್ದಾರಿ. ಎಲ್ಲರೂ ಅದಕ್ಕಾಗಿ ಒಂದಾಗಿ ಎಂದರು.
ಓದಿ: Covid update : ರಾಜ್ಯದಲ್ಲಿಂದು 1431 ಪಾಸಿಟಿವ್, 21 ಮಂದಿ ಸೋಂಕಿನಿಂದ ಸಾವು