ಬೆಂಗಳೂರು: ರಾಜ್ಯದ ಎರಡು ವಿಧಾನಸಭಾ ಉಪಚುನಾವಣೆ ಗೆಲುವಿಗೆ ಆಮಿಷದ ಮೇಲೆ ಆಮಿಷ ಒಡ್ಡುತ್ತಿರುವ ರಾಜ್ಯ ಸರ್ಕಾರ ಇದೀಗ ವಸತಿ ಯೋಜನೆಯಡಿ ಹೊಸ ಕೊಡುಗೆಯನ್ನು ಘೋಷಿಸಿದೆ.
ಇಂದು ರಾಜ್ಯ ಸರ್ಕಾರದ ವಸತಿ ಇಲಾಖೆಯಿಂದ ಹೊಸ ಆದೇಶ ಹೊರಬಿದ್ದಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಗಬೇಕಿದ್ದು, ಎರಡು ಕ್ಷೇತ್ರಗಳ ಗೆಲುವಿಗೆ ಕಾರ್ಯತಂತ್ರ ರೂಪಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಈಗಾಗಲೇ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ಘೋಷಿಸಿದ್ದು, ಮತದಾರರನ್ನು ಸೆಳೆಯುವ ಸಲುವಾಗಿ ಇನ್ನಷ್ಟು ಜನಪ್ರಿಯ ಯೋಜನೆಗಳನ್ನು ಎರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಘೋಷಿಸುತ್ತಿದೆ.
ಇಂದು ಇದರ ಭಾಗವಾಗಿ ವಸತಿ ಇಲಾಖೆಯ ಮೂಲಕ ಮನೆ ನಿರ್ಮಿಸಿಕೊಡುವ ಯೋಜನೆಯನ್ನು ಘೋಷಿಸಿದೆ. ಈ ಕೊಡುಗೆ ಅಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರತ್ಯೇಕ ವಸತಿ ಯೋಜನೆಗಳ ಅಡಿ 7500 ಮನೆಗಳನ್ನು ಮಂಜೂರು ಮಾಡಲಾಗಿದೆ.
ಕೇಂದ್ರ ಸರ್ಕಾರದ ಯೋಜನೆ ಅಡಿ ಕೊಡುಗೆ
ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2020 -21 ನೇ ಸಾಲಿನಲ್ಲಿ ಮಂಜೂರು ಮಾಡಿರುವ 1,51,715 ಮನೆಗಳಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ 5000 ಮನೆ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ 5000 ಮನೆಗಳನ್ನು ಸೇರಿದಂತೆ ಒಟ್ಟು 10 ಸಾವಿರ ಮನೆಗಳನ್ನು ಮಂಜೂರು ಮಾಡಲು ಅನುಮತಿ ನೀಡಲಾಗಿದೆ.
ರಾಜ್ಯ ಸರ್ಕಾರದ ಯೋಜನೆಯಡಿ ಕೊಡುಗೆ
ಡಿ ದೇವರಾಜ ಅರಸು ವಸತಿ ಯೋಜನೆ ಅಡಿ ಅಲೆಮಾರಿ ಹಾಗೂ ಅರೆ ಅಲೆಮಾರಿ ವರ್ಗದವರಿಗೆ ಮನೆಗಳನ್ನು ಮಂಜೂರು ಮಾಡಲು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಗೆ ಅನುಮೋದನೆ ನೀಡಲಾಗಿದೆ. ಇದರ ಫಲವಾಗಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 2500 ಮನೆ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ 2500 ಮನೆ ನಿರ್ಮಿಸುವ ಕಾರ್ಯಕ್ಕೆ ಅನುಮೋದನೆ ದೊರಕಿದೆ.
ಎರಡು ಕ್ಷೇತ್ರಗಳ ಒಟ್ಟು 5000 ಫಲಾನುಭವಿಗಳು ಯೋಜನೆಯ ಅನುಕೂಲ ಪಡೆದು ಮನೆಗಳನ್ನು ಹೊಂದಲಿದ್ದಾರೆ. ಈಗಾಗಲೇ ಕೋವಿಡ್ ಸಂಕಷ್ಟ ಹಾಗೂ ನೆರೆ ಸಮಸ್ಯೆ ಹಿನ್ನೆಲೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಯಾವುದೇ ಮನೆಗಳನ್ನು ನಿರ್ಮಿಸಿಕೊಡದಿರಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಆದರೆ, ಉಪಚುನಾವಣೆಯಲ್ಲಿ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿರುವ ಸರ್ಕಾರ ಎರಡು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಡುವ ಯೋಜನೆಯನ್ನು ಘೋಷಿಸಿದೆ.