ಬೆಂಗಳೂರು: ನಗರದಲ್ಲಿ ಹಲವು ವರ್ಷಗಳಿಂದ ಅವ್ಯಾಹತವಾಗಿ ಡ್ರಗ್ಸ್ ಮಾರಾಟ ಮಾಡಿ ಲಕ್ಷಾಂತರ ರೂ. ಹಣ ಸಂಪಾದನೆ ಮಾಡುತ್ತಿದ್ದ ಏಳು ಮಂದಿ ಆರೋಪಿಗಳನ್ನು ಪೂರ್ವ ವಿಭಾಗದ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ನೈಜಿರಿಯಾ ಪ್ರಜೆಗಳಾದ ಉಗುಚುಕ್ವ ಹ್ಯಾರಿಸನ್ ಆಗಬಂಟಿ, ಜಾನ್ ನ್ಯಾನ್ಸೊ, ಉಸ್ಮಾನ್ ಮೊಹಮ್ಮದ್ ಸೇರಿದಂತೆ ಏಳು ಆರೋಪಿಗಳನ್ನು ಬಂಧಿಸಿ ಸುಮಾರು 4 ಕೋಟಿ ಮೌಲ್ಯದ 2719 ಗ್ರಾಂ ಎಂಡಿಎಂಎ, 200 ಗ್ರಾಂ ಕೊಕೇನ್, 1939 ಎಸ್ಕೆಟೆನ್ಸಿ ಟ್ಯಾಬ್ ಲೆಟ್ಸ್, 526 ಎಲ್ ಎಸ್ ಡಿ ಸ್ಟ್ರಿಪ್ಸ್ ,526 ಹಾಗೂ 42.5 ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ.
ಈ ಕುರಿತು ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಗೋವಿಂದಪುರ ಠಾಣೆಯ ಇನ್ಸ್ಪೆಕ್ಟರ್ ಪ್ರಕಾಶ್ ಹಾಗೂ ಕೆ.ಜಿ.ಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಮುಖ ಆರೋಪಿಗಳಾದ ಜಾನ್ ಪೆಡ್ಲರ್ ಹಾಗೂ ಜಾನ್ ನ್ಯಾನ್ಸೋ ಬಿಸಿನೆಸ್ ವೀಸಾದಡಿ ಬಂದರೆ, ಇಮ್ಯಾನುಯಲ್ ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದ. ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಓದಿ: ಇಬ್ಬರಿಗೂ ಒಪ್ಪಿಗೆಯಿದ್ದರೆ ಅದು ಅತ್ಯಾಚಾರವಾಗಲ್ಲ: ರೇಣುಕಾಚಾರ್ಯ
ಅಕ್ರಮವಾಗಿ ಬಂದ ವಿದೇಶಿ ಪ್ರಜೆಗಳಿಗೆ ನಗರದಲ್ಲಿ ನೆಲೆಸಲು ಬಾಡಿಗೆ ಕೊಟ್ಟರೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು,ಅಪರಾಧ ಕೃತ್ಯಗಳಲ್ಲಿ ತೊಡಗುವ ವೀಸಾ, ಪಾಸ್ ಪೋರ್ಟ್, ದಾಖಲಾತಿಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಮನೆ ಬಾಡಿಗೆ ನೀಡಬೇಕು. ಅಲ್ಲದೇ, ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.