ಬೆಂಗಳೂರು: ಇತ್ತೀಚೆಗಷ್ಟೇ ನಗರದ ಹೆಬ್ಬಾಳದಲ್ಲಿ ಶಾಲಾ ಬಾಲಕಿ ಅಕ್ಷಯಾ ಮೇಲೆ ಬಿಬಿಎಂಪಿ ಕಸದ ಲಾರಿ ಹರಿದ ಪರಿಣಾಮ ಮೃತಪಟ್ಟ ದುರ್ಘಟನೆ ನಡೆದಿತ್ತು. ಈ ದುರಂತ ಮಾಸುವ ಮುನ್ನವೇ, ನಗರದಲ್ಲಿ ಮತ್ತೆ ಅದೇ ಮಾದರಿಯಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ವೃದ್ಧರೊಬ್ಬರು ಬಿಬಿಎಂಪಿಯ ಕಸದ ಲಾರಿಗೆ ಬಲಿಯಾಗಿದ್ದಾರೆ. ರಾಮಯ್ಯ(60) ಮೃತ ವೃದ್ಧ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯ ರೇವಾ ಕಾಲೇಜು ಬಳಿ ಈ ಅವಘಡ ನಡೆದಿದೆ.
ಇಂದು ಮಧ್ಯಾಹ್ನ ಬಾಗಲೂರು ಕ್ರಾಸ್ ಬಳಿಯಿರುವ ರೇವಾ ಯೂನಿವರ್ಸಿಟಿ ಬಳಿ ಬರುವಾಗ ಹಿಂಬದಿಯಿಂದ ವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ರಾಮಯ್ಯ ಮೇಲೆ ಹರಿದಿದೆ. ಪರಿಣಾಮ ವೃದ್ಧನ ದೇಹ ಛಿದ್ರ-ಛಿದ್ರಗೊಂಡಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳದಿಂದ ಚಾಲಕ ಪರಾರಿಯಾಗಿದ್ದಾನೆ. ಚಿಕ್ಕಜಾಲ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೃತ ರಾಮಯ್ಯ ಸಂಬಂಧಿಕ ಶಿವಕುಮಾರ್, ತಮ್ಮ ಸಂಬಂಧಿಕರ ಯುವತಿಗೆ ಗಂಡು ನೋಡಲು ಸಾತನೂರಿಗೆ ಹೋಗಿ ಮರಳಿ ಬರುವಾಗ ಬಿಬಿಎಂಪಿ ಕಸದ ಲಾರಿ ಅವರ ಮೇಲೆ ಹತ್ತಿ ಈ ದುರ್ಘಟನೆ ನಡೆದಿದೆ. ಬಿಬಿಎಂಪಿ ಕಸದ ಲಾರಿ ಚಾಲಕರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ತಪ್ಪಿತಸ್ಥ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ಅವರಿಂದ ಆ್ಯಕ್ಸಿಡೆಂಟ್ಗಳು ಹೆಚ್ಚಾಗುತ್ತಿವೆ. ರಾಮಯ್ಯ ಅವರು ಕುಟುಂಬದ ಆಧಾರ ಸ್ತಂಭವಾಗಿದ್ದರು. ಈಗ ಅವರ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಶಿವಕುಮಾರ್ ಒತ್ತಾಯಿಸಿದ್ದಾರೆ.