ಬೆಂಗಳೂರು: ಬಿಬಿಎಂಪಿಯಲ್ಲಿ ಉದ್ಯೋಗಿ ಬಾಕಿ ವೇತನ ಪಾವತಿ ಹೆಸರಲ್ಲಿ 60 ಕೋಟಿ ರೂ. ಹಗರಣ ನಡೆದಿದೆ ಎಂದು ಆಮ್ ಆದ್ಮಿ ಪಕ್ಷ ಕರ್ನಾಟಕದ ರಾಜ್ಯ ಮುಖ್ಯ ವಕ್ತಾರ ಶರತ್ ಖಾದ್ರಿ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರತ್ ಖಾದ್ರಿ, 2007ರಲ್ಲಿ 110 ಗ್ರಾಮಗಳನ್ನು ಬಿಬಿಎಂಪಿಗೆ ಸೇರಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಅಂದಿನ ಗ್ರಾಮ ಪಂಚಾಯಿತಿಗಳ ದಿನಗೂಲಿ ಕಾರ್ಮಿಕರನ್ನೂ ಬಿಬಿಎಂಪಿಗೆ ವಿಲೀನಗೊಳಿಸಲಾಯಿತು. ಈ ದಿನಗೂಲಿ ಕಾರ್ಮಿಕರು ವೇತನ ಹೆಚ್ಚಳಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು ಮತ್ತು ನ್ಯಾಯಾಲಯ 2013 ರಲ್ಲಿ "ಸಮಾನ ಕೆಲಸಕ್ಕೆ ಸಮಾನ ವೇತನ" ಎಂದು ಸೂಚಿಸಿತ್ತು.
ಕರ್ನಾಟಕ ಸರ್ಕಾರ ದಿನಾಂಕ 22-02-2014ರಲ್ಲಿ ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ದಿ ನಿಯಮಗಳನ್ನು ಸಹ ಬಿಡುಗಡೆ ಮಾಡಿದೆ. ಇದರ ಮೇರೆಗೆ ಒಬ್ಬ ದಿನಗೂಲಿ ನೌಕರ ಸೇವೆಯಲ್ಲಿ ಮುಂದುವರಿದ ವೃಂದದಲ್ಲಿ ಜ್ಯೇಷ್ಠತೆಗೆ ಅರ್ಹನಾಗುವುದಿಲ್ಲ ಮತ್ತು ಉಳಿದ ಸೇವಾ ಅವಧಿಯಲ್ಲಿ ಯಾವುದೇ ಮುಂಬಡ್ತಿಗೆ ಅರ್ಹನಾಗತಕ್ಕದ್ದಲ್ಲ.
ನಂತರ, ಈ ನೌಕರರನ್ನು ಕಾಯಂಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಬಿಬಿಎಂಪಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಮನವಿ ಮಾಡಿತ್ತು. ಇದಕ್ಕೆ ಉತ್ತರಿಸಿದ ಪಂಚಾಯತ್ ರಾಜ್ ಇಲಾಖೆ, 'ಈಗ ಈ ನೌಕರರು ಬಿಬಿಎಂಪಿ ವ್ಯಾಪ್ತಿಯಲ್ಲಿದ್ದು, ಅವರನ್ನು ಕಾಯಂಗೊಳಿಸುವ ಅಧಿಕಾರ ಪಂಚಾಯತ್ ರಾಜ್‌ಗೆ ಇಲ್ಲ' ಎಂದು ಹೇಳಿತ್ತು.
ಆದರೆ, ಉಮಾದೇವಿ ಪ್ರಕರಣದಲ್ಲಿ ಮಾನ್ಯ ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಯಾವುದೇ ದಿನಗೂಲಿ ನೌಕರನನ್ನು ಖಾಯಂ ಮಾಡಲು ಅವಕಾಶವಿರುವುದಿಲ್ಲ. ಏಕೆಂದರೆ, ದಿನಗೂಲಿ ನೌಕರರ ನೇಮಕಾತಿ ನಿಯಮಗಳ ಮೇರೆಗೆ ಆಗಿರುವುದಿಲ್ಲ. ಹೀಗೆ ಮಾಡಿದಲ್ಲಿ ಲಕ್ಷಾಂತರ ಕೆಲಸವಿಲ್ಲದೆ ಜನರಿಗೆ ಸಾಮಾಜಿಕ ನ್ಯಾಯ ಒದಗಿಸಿದಂತಾಗುವುದಿಲ್ಲ.
ಆದರೆ, ಈಗ 2021 ರಲ್ಲಿ ಈ ಉದ್ಯೋಗಿಗಳಿಗೆ 2007 ರಿಂದ ಹಿಂದಿನ ಬಾಕಿ ನೀಡಲಾಗಿದೆ ಮತ್ತು ಅಂದಿನಿಂದ ಅವರ ಮೂಲ ವೇತನ ಹೆಚ್ಚಿಸಲಾಗಿದೆ. 534 ಜನರಿಗೆ, ಪ್ರತಿ ಉದ್ಯೋಗಿಗೆ ಸುಮಾರು ₹10-15 ಲಕ್ಷಗಳ ಬಾಕಿ ಮೊತ್ತವನ್ನು ನೀಡಲಾಗಿದೆ. ಒಟ್ಟು ಮೊತ್ತವು ₹60 ಕೋಟಿಗಳಿಗಿಂತ ಹೆಚ್ಚು.
ಆದರೆ, ಈ ನೌಕರರು ಬಿಬಿಎಂಪಿಯಿಂದ ಯಾವುದೇ ನೇಮಕಾತಿ ಪತ್ರವನ್ನು ಹೊಂದಿಲ್ಲ ಮತ್ತು ಅಂತಹ ನೌಕರರ ಸೇವಾ ದಾಖಲೆಗಳಿಲ್ಲ ಏಕೆಂದರೆ ಅವರನ್ನು ಇನ್ನೂ ಕಾಯಂಗೊಳಿಸಲಾಗಿಲ್ಲ. ಒಂದು ಕಡೆ ಬಿಬಿಎಂಪಿಯು 15,000 ಪೌರಕಾರ್ಮಿಕರಿಗೆ ಕಳೆದ 3 ತಿಂಗಳಿನಿಂದ ಸಂಬಳ ನೀಡಲು ಹಣವಿಲ್ಲ ಎನ್ನುತ್ತಿದೆ. ಆದರೆ ಮತ್ತೊಂದೆಡೆ ಬಿಬಿಎಂಪಿಯು ಈ 534 ನೌಕರರಿಗೆ ಅನಗತ್ಯ ಬಾಕಿ ಪಾವತಿಸಲು ಮುಂದಾಗಿದೆ.
ಈ ಬಾಕಿ ಪಾವತಿ ಕೇವಲ ಬಿಬಿಎಂಪಿಯಿಂದ ಹಣ ಲೂಟಿ ಮಾಡುವ ಬಿಜೆಪಿ ಸರ್ಕಾರದ ವಂಚನೆಯ ಯೋಜನೆಯಾಗಿದೆ ಎಂದು ಶರತ್ ಖಾದ್ರಿ ಆರೋಪಿಸಿದರು. ಇಂತಹ ಅನಾವಶ್ಯಕ ಬಾಕಿ ಪಾವತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಹೀಗಾಗಿ, ಬೆಂಗಳೂರಿಗರ ತೆರಿಗೆ ಹಣವನ್ನು ಲೂಟಿ ಮಾಡಲಾಗುತ್ತಿದೆ. ಆದ್ದರಿಂದ, ಇದನ್ನು ಸಕ್ಷಮ ಪ್ರಾಧಿಕಾರದಿಂದ ತನಿಖೆ ನಡೆಸಬೇಕು ಎಂದು ಹೇಳಿದರು.
ಎಸಿಬಿ ಮತ್ತು ಲೋಕಾಯುಕ್ತರು ಇದನ್ನು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಇದರ ಬಗ್ಗೆ ತನಿಖೆ ನಡೆಸಬೇಕು. ಪುನಃ ಸುಮಾರು 400 ಜನರನ್ನು ಅನಧಿಕೃತವಾಗಿ ಖಾಯಂ ಮಾಡುವ ಬಗ್ಗೆ ಕ್ರಮ ಜರುಗಿಸಲಾಗುತ್ತಿದೆ ಎಂದರು.
ಇನ್ನು ಆಮ್ ಆದ್ಮಿ ಪಕ್ಷದ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಬಿಜೆಪಿ ರಾಜ್ಯ ಸರ್ಕಾರ ಇಂತಹ ಮೋಸದ ಯೋಜನೆಗಳ ಮೂಲಕ ಬಿಬಿಎಂಪಿಯನ್ನು ಮುಕ್ತವಾಗಿ ಲೂಟಿ ಮಾಡುತ್ತಿದ್ದು, ಒಂದು ವರ್ಷಕ್ಕೂ ಹೆಚ್ಚು ಕಾಲ ಬಾಕಿ ಇರುವ ಬಿಬಿಎಂಪಿ ಚುನಾವಣೆಯನ್ನು ನಡೆಸುತ್ತಿಲ್ಲ ಎಂದು ಆರೋಪಿಸಿದರು.