ಬೆಂಗಳೂರು: ನಗರದಲ್ಲಿ ಕೊರೊನಾ ಅಟ್ಟಹಾಸ ಮತ್ತೆ ಮುಂದುವರೆದಿದೆ. ಕೊರೊನಾ ವಾರಿಯರ್ ಆಗಿ ಕಾರ್ಯ ನಿರ್ವಹಣೆ ಮಾಡಿದ್ದ ಪೊಲೀಸರಲ್ಲಿ ಮತ್ತೆ ಕೊರೊನಾ ಸೋಂಕು ಉಲ್ಬಣವಾಗುತ್ತಿದೆ.
ವಿಧಾನಸೌಧ ಠಾಣೆ ಸೀಲ್ ಡೌನ್: ವಿಧಾನಸೌಧ ಠಾಣೆಯ ಓರ್ವ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ವಿಧಾನಸೌಧ ಸೇರಿದಂತೆ ಹಲವೆಡೆ ಭದ್ರತೆಗೆ ಕಾನ್ಸ್ಟೇಬಲ್ ನಿರ್ವಹಣೆ ಮಾಡಿದ್ದು, ಈ ವೇಳೆ ಸೋಂಕು ತಗುಲಿರುವ ಅನುಮಾನ ಇದೆ. ಸದ್ಯ ಠಾಣೆಯಲ್ಲಿ ಸೋಂಕಿತನ ಸಂಪರ್ಕದಲ್ಲಿರುವವರನ್ನ ಕ್ವಾರಂಟೈನ್ ಮಾಡಲಾಗಿದೆ. ಆದರೆ ಇತರೆ ಸಿಬ್ಬಂದಿ ಭಯದಲ್ಲೇ ಕರ್ತವ್ಯ ನಿಭಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಯಶವಂತಪುರ ಠಾಣೆ ಸೀಲ್ ಡೌನ್: ಯಶವಂತಪುರ ಠಾಣೆಯ ಕಾನ್ಸ್ಟೇಬಲ್ ಓರ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇವರು ಕೋರ್ಟ್ ಪಿಸಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಸದ್ಯ ನ್ಯಾಯಾಲಯಕ್ಕೆ ರಜೆ ಇರುವ ಕಾರಣ ಯಶವಂತಪುರ ಠಾಣಾ ಸುತ್ತ ಓಡಾಡಿದ್ದರು. ಇವರ ಪತ್ನಿ ಕೂಡ ಅಬಕಾರಿ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಸೋಂಕಿತರ ಸಂಪರ್ಕದಲ್ಲಿದ್ದವರನ್ನ ಕ್ವಾರಂಟೈನ್ ಮಾಡಲಾಗಿದೆ.
ಇದರ ಜೊತೆಗೆ ರಾಜಗೋಪಾಲ ನಗರ ಠಾಣೆಯ ಒಬ್ಬ ಸಿಬ್ಬಂದಿ, ಮಲ್ಲೇಶ್ವರಂ ಠಾಣೆಯ ಇಬ್ಬರು ಸಿಬ್ಬಂದಿ, ನಂದಿನಿ ಲೇಔಟ್ ಠಾಣೆಯ ಒಬ್ಬ ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಒಟ್ಟು ಇಲ್ಲಿಯವರೆಗೆ 454 ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿದೆ. 21 ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ.