ಬೆಂಗಳೂರು: ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಇಂದು ಬೆಳಗ್ಗೆ ಕರೆದಿದ್ದ ಉಪಹಾರ ಕೂಟಕ್ಕೆ ಆರು ಜನ ಸಚಿವರು ಗೈರುಹಾಜರಾಗಿದ್ದಾರೆ.
ಸಚಿವರಾದ ಇ. ತುಕಾರಾಂ, ಶಿವಾನಂದ ಪಾಟೀಲ್, ಎಂಟಿಬಿ ನಾಗರಾಜ್, ಆರ್.ವಿ. ದೇಶಪಾಂಡೆ, ಸತೀಶ್ ಜಾರಕಿಹೊಳಿ ಉಪಹಾರ ಕೂಟಕ್ಕೆ ಬಂದಿಲ್ಲ. ಅನಿವಾರ್ಯ ಕಾರಣಗಳಿಂದ ಆಗಮಿಸಲು ಸಾಧ್ಯವಾಗಿಲ್ಲವೆಂದು ಕೆಲವರು ತಿಳಿಸಿದ್ದು ಮತ್ತೆ ಕೆಲವರು ಯಾವುದೇ ಮಾಹಿತಿ ನೀಡಿಲ್ಲವೆಂದು ತಿಳಿದುಬಂದಿದೆ. ಎಂಟಿಬಿ ನಾಗರಾಜ್ ಈಗಲೂ ಹೊಸಕೋಟೆಯಲ್ಲಿ ಇದ್ದು, ಉಪಹಾರಕೂಟಕ್ಕೆ ಆಗಮಿಸುವ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಉಪಹಾರಕ್ಕೆ ಆಗಮಿಸದ ಸಚಿವರೂ ಸಹ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೇ ಹೇಗೆ ಎನ್ನುವ ಆತಂಕ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ.
ಸದ್ಯ ಉಪಹಾರ ಕೂಟದಲ್ಲಿ ಪರಮೇಶ್ವರ್, ಯುಟಿ ಖಾದರ್, ಡಿಕೆ ಶಿವಕುಮಾರ್, ಶಿವಶಂಕರರೆಡ್ಡಿ, ಕೃಷ್ಣಬೈರೇಗೌಡ, ಪ್ರಿಯಾಂಕಾ ಖರ್ಗೆ, ಡಾ.ಜಯಮಾಲ, ವೆಂಕಟರಮಣಪ್ಪ, ರಾಜಶೇಖರ್ ಪಾಟೀಲ್, ಕೆ.ಜೆ ಜಾರ್ಜ್, ರಹೀಂಖಾನ್, ಎಂಬಿ ಪಾಟೀಲ್, ಪಿಟಿ ಪರಮೇಶ್ವರ್ ನಾಯ್ಕ್, ಆರ್. ಶಂಕರ್, ಜಮೀರ್ ಅಹಮದ್ ಖಾನ್ ಹಾಗೂ ಆರ್ ಬಿ ತಿಮ್ಮಾಪುರ್ ಹಾಜರಾಗಿದ್ದರು. ಉಪ ಮುಖ್ಯಮಂತ್ರಿ ಅವರು ಬೆಳಗ್ಗೆ ಉಪಹಾರ ಕೂಟಕ್ಕೆ ಕಾಂಗ್ರೆಸ್ ಪಕ್ಷದ ಎಲ್ಲ ಸಚಿವರನ್ನೂ ಆಹ್ವಾನಿಸಿದ್ದರು. ಇದೇ ಸಮಯದಲ್ಲಿ ಮೈತ್ರಿ ಸರ್ಕಾರಕ್ಕೆ ಎದುರಾದ ಸಂಕಷ್ಟದ ಬಗ್ಗೆ ಹಾಗೂ ಹಾಲಿ ಸಚಿವರ ಸಾಮೂಹಿಕ ರಾಜೀನಾಮೆ ಪಡೆಯುವ ಕುರಿತು ಚರ್ಚೆ ನಡೆಸುವ ಸುಳಿವನ್ನೂ ನೀಡಲಾಗಿತ್ತು.