ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿ.ವಿ ಪುರಂ ತಿಂಡಿ ಬೀದಿಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಸ್ಥಳೀಯ ಶಾಸಕ ಉದಯ್ ಬಿ ಗರುಡಾಚಾರ್ ಶಂಕುಸ್ಥಾಪನೆ ನೆರವೇರಿಸಿದರು.
ವಿವಿ ಪುರಂನ ತಿಂಡಿ ಬೀದಿಯಲ್ಲಿ ಸಮರ್ಪಕ ಮೂಲ ಸೌಕರ್ಯಗಳನ್ನು ಒಗದಿಸುವ ನಿಟ್ಟಿನಲ್ಲಿ ಹಾಗೂ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಜ್ಜನ್ ರಾವ್ ವೃತ್ತ ಮತ್ತು ಮಿನರ್ವ ವೃತ್ತದ ನಡುವೆ ಇರುವ ಸುಮಾರು 209 ಮೀಟರ್ ಉದ್ದದ ರಸ್ತೆ ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ವಲಯ ಆಯುಕ್ತ ಜಯರಾಮ್ ರಾಯಪುರ ತಿಳಿಸಿದರು.
ತಿಂಡಿ ಬೀದಿಯಲ್ಲಿ ವ್ಯವಸ್ಥಿತವಾಗಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮತ್ತು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಲ್ಲಲ್ಲಿ ಆಸನಗಳನ್ನು ಹಾಕಲಾಗುತ್ತಿದೆ. ರಸ್ತೆಯ ಎರಡೂ ಬದಿ 900 ಮಿ.ಮೀ ಆರ್.ಸಿ.ಸಿ ಕಾಲುವೆ ನಿರ್ಮಾಣವಾಗಲಿದೆ. 6 ಕಡೆ ಕೈತೊಳೆಯುವ ವ್ಯವಸ್ಥೆ, ಎರಡೂ ಕಡೆ 300 ಮಿ.ಮೀ ನ ಚರಂಡಿ ನೀರಿನ ಪೈಪ್ ಲೈನ್ ಅಳವಡಿಕೆ, ಬೀದಿ ದೀಪಗಳ ಅಳವಡಿಕೆ ಮಾಡಲಾಗುತ್ತದೆ. ಎರಡೂ ಕಡೆ ಮಳಿಗೆಗಳ ಮುಂಭಾಗ ನೆರಳು ನೀಡುವ ಕೆನೊಪಿ ಹಾಕಲಾಗುತ್ತಿದೆ ಎಂದರು.
ಬಿನ್ನವಾಗಿ ಫುಡ್ ಸ್ಟ್ರೀಟ್ ನಿರ್ಮಾಣ: ಕಮರ್ಷಿಯಲ್ ಸ್ಟ್ರೀಟ್ ಹಾಗೂ ಚರ್ಚ್ ಸ್ಟ್ರೀಟ್ ಗಿಂತ ಭಿನ್ನವಾಗಿ ಫುಡ್ ಸ್ಟ್ರೀಟ್ ನಿರ್ಮಿಸಲಾಗುವುದು. ಸಂಜೆ 6 ಗಂಟೆಯ ನಂತರ ವಾಹನಗಳ ಸಂಚಾರ ನಿಷೇಧಿಸುವ ಚಿಂತನೆ ಇದೆ ಎಂದು ತಿಳಿಸಿದರು.
ಮುಂದಿನ 4 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಯೋಜನೆ: ಇಲ್ಲಿ 39 ಮಳಿಗೆಗಳು ಹಾಗೂ ಬೀದಿ ವ್ಯಾಪಾರಿಗಳಿದ್ದು, ಈಗಾಗಲೇ ಎಲ್ಲ ವ್ಯಾಪಾರಿಗಳ ಜೊತೆ ಕಾಮಗಾರಿ ಕೈಗೆತ್ತಿಕೊಳ್ಳುವ ಕುರಿತು ಮಾತನಾಡಲಾಗಿದೆ. ಕಾಮಗಾರಿಯ ವೇಳೆ ವ್ಯಾಪಾರಕ್ಕೆ ಯಾವುದೇ ಸಮಸ್ಯೆ ಆಗದಂತೆ ಕಾಮಗಾರಿ ನಡೆಸಿ ಮುಂದಿನ 4 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಚಿಕನ್ ರೋಲ್ ತಂದ ಆಪತ್ತು.. ಹೋಟೆಲ್ ಹುಡುಗರ ರೂಂಗೆ ಬೆಂಕಿ ಹಚ್ಚಿದ ಇಬ್ಬರು ಖಾಕಿ ಬಲೆಗೆ