ಬೆಂಗಳೂರು: ದೇಶಾದ್ಯಂತ ಲಾಕ್ ಡೌನ್ 5 ನೇ ದಿನಕ್ಕೆ ಕಾಲಿಟ್ಟಿದೆ. ವೀಕೆಂಡ್ ಆದ್ರೂ ಕೂಡ ಇಂದು ಕೆ ಆರ್ ಮಾರ್ಕೆಟ್ ಸಂಪೂರ್ಣ ಸ್ತಬ್ಧವಾಗಿದೆ.
ಮಾರುಕಟ್ಟೆಗೆ ಬರುವ ದಾರಿಗಳನ್ನ ಪೊಲೀಸ್ರು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಸದಾ ಸಾವಿರಾರು ವ್ಯಾಪಾರಸ್ಥರಿಂದ ತುಂಬಿರುತ್ತಿದ್ದ ಮಾರುಕಟ್ಟೆ ಇಂದು ಬಿಕೋ ಎನ್ನುತ್ತಿದೆ. ಹಾಗೆಯೇ ಮಾರುಕಟ್ಟೆಗೆ ಬರುವ ಗ್ರಾಹಕರಿಗೆ ನಿಲ್ಲಲು ವ್ಯವಸ್ಥೆ ಮಾಡಿದ ಬಾಕ್ಸ್ಗಳು ಮಾತ್ರ ಜನರಿಲ್ಲದೆ ಖಾಲಿ ಖಾಲಿಯಾಗಿ ಕಂಡುಬಂದಿವೆ.
ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆ.ಆರ್. ಮಾರುಕಟ್ಟೆಯನ್ನು ನಗರದ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಹಾಗಾಗಿ ಸದ್ಯದ ಮಟ್ಟಿಗೆ ಕೆ.ಆರ್. ಮಾರ್ಕೆಟ್ನಲ್ಲಿ ಯಾವುದೇ ವ್ಯಾಪಾರ ವಹಿವಾಟುಗಳು ಮಟ್ಟಿಗೆ ನಡೆಯುತ್ತಿಲ್ಲ. ಮತ್ತೊಂದೆಡೆ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನಕ್ಕೆ ಶಿಫ್ಟ್ ಮಾಡಿರುವ ವಿಚಾರ ಕೆಲವರಿಗೆ ತಿಳಿಯದೇ ವ್ಯಾಪಾರ ಕೂಡ ಅಷ್ಟೊಂದು ನಡೀತಿಲ್ಲ ಅನ್ನೋ ಗೋಳು ವ್ಯಾಪಾರಸ್ಥರದ್ದಾಗಿದೆ.
ಮತ್ತೊಂದೆಡೆ ಸಿಲಿಕಾನ್ ಸಿಟಿಯಲ್ಲಿ ಖಾಕಿ ಕೂಡ ಗಸ್ತು ತಿರುಗುತ್ತಿದ್ದಾರೆ. ಲಾಕ್ ಡೌನ್ ಮೀರಿ ಅನಗತ್ಯವಾಗಿ ಓಡಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಎಂ ಆದೇಶ ಇರುವ ಹಿನ್ನೆಲೆ ಪೊಲೀಸರು ಕೈಯಲ್ಲಿ ಲಾಠಿ ಹಿಡಿಯದೇ ವಿನಾಕಾರಣ ಓಡಾಡುವವರ ಮೇಲೆ ಕಣ್ಣಿಟ್ಟು ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡ್ತಿದ್ದಾರೆ.