ಕನ್ನಡ ಚಿತ್ರರಂಗದ 'ಯುವರತ್ನ' ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣ ಇಡೀ ರಾಜ್ ಕುಟುಂಬಕ್ಕಷ್ಟೇ ಅಲ್ಲ, ಕನ್ನಡ ಚಿತ್ರರಂಗಕ್ಕೂ ದೊಡ್ಡಮಟ್ಟದಲ್ಲಿ ನಷ್ಟ ಆಗಿದೆ. ಅದರಲ್ಲೂ ಸಿನಿಮಾ ನಿರ್ಮಾಪಕರು, ಚಿತ್ರಮಂದಿರದ ಮಾಲೀಕರು ಹಾಗು ಸಿನಿಮಾ ವಿತರಕರಿಗೆ ದೊಡ್ಡ ಮಟ್ಟದ ನಷ್ಟವಾಗಿದೆ.
ಚಿತ್ರರಂಗದ ವತಿಯಿಂದ ಪುನೀತ್‌ಗೆ ನಮನ ಸಲ್ಲಿಸುವ ಹಲವು ಕಾರ್ಯಕ್ರಮಗಳೂ ನಡೆದಿವೆ. ಇದೀಗ ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದಿಂದ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಬಗ್ಗೆ ಕನ್ನಡ ಪ್ರದರ್ಶಕರ ವಲಯದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಪತ್ರದ ಮೂಲಕ ಈ ವಿಷಯ ತಿಳಿಸಿದ್ದಾರೆ.
ನಾಳೆ ರಾಜ್ಯದ 550ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತೆ. ನಾಳೆ ಸಂಜೆ 6ಕ್ಕೆ ರಾಜ್ಯದ ಎಲ್ಲಾ ಚಿತ್ರಮಂದಿರಗಳು ಹಾಗು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಗೀತಾಂಜಲಿ, ಪುಷ್ಪಾಂಜಲಿ, ದೀಪಾಂಜಲಿ ಮೂಲಕ ಚಿತ್ರ ಪ್ರದರ್ಶಕರಿಂದ ಪುನೀತ್‌ಗೆ ನಮನ ಸಲ್ಲಿಸಲಾಗುತ್ತದೆ.
ಸಿನಿಮಾ ಗೀತರಚನೆಕಾರ ನಾಗೇಂದ್ರ ಪ್ರಸಾದ್ ರಚಿಸಿರುವ, ಬೆಳ್ಳಿ ಬಾನಿನಲ್ಲಿ ಸೇರಿ ಹೋದೆ ಅಪ್ಪು, ಬೆಳ್ಳಿ ಪರದೆ ಮೇಲೆ ಉಳಿಸಿಹೋದೆ ನೆನಪು. ಕಣ್ಣೀರು ನಿಲ್ಲುತ್ತಿಲ್ಲ, ಕನ್ನಡನಾಡು ಮರೆಯೊಲ್ಲ, ಚಿತ್ರಮಂದಿರದಲ್ಲಿ ಇರುವಾ ಸೀಟುಗಳೆಲ್ಲ, ಅಪ್ಪು ಬೇಕು ಅಂತಾ ಕೇಳಿ ಅಳುತಿವೆಯಲ್ಲ, ಉತ್ತರ ಏನು..? ಯುವರತ್ನ ರಾಜಕುಮಾರ.. ನಮ್ಮಪ್ರಾರ್ಥನೆ ಕೇಳು, ಬೇಡಾ ಬೇರೆ ಏನು ಅಪ್ಪು ಆತ್ಮಕ್ಕೆ ಶಾಂತಿ ನೀಡೂ ದೇವರೆ ನೀನು ದೊಡ್ಮನೆ ಹುಡುಗ ಹೋಗಿ ಬಾ ನಮನ ಎಂದು ಪದಗಳಿಂದ,ಹಾಡಿನ ಮೂಲಕ ಗೀತಾಂಜಲಿ ಅರ್ಪಿಸಲಾಗುತ್ತೆ.
ಜೊತೆಗೆ, ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಹಾಗೂ ಚಿತ್ರಮಂದಿರಗಳಲ್ಲಿ ಮೊಂಬತ್ತಿ ಹಚ್ಚಿ ಪುನೀತ್‌ಗೆ ದೀಪಾಂಜಲಿ ನಡೆಸಲಾಗುವುದು. ನಂತರ ಮೌನಾಚರಣೆ ಮೂಲಕ ಪುನೀತ್ ರಾಜ್‌ಕುಮಾರ್‌ಗೆ ನಮನ ಸಲ್ಲಿಸಲಾಗುವುದು. ಈ ಮೂಲಕ ಥಿಯೇಟರ್ ಸಿಬ್ಬಂದಿ, ಅಭಿಮಾನಿಗಳು ನೆಚ್ಚಿನ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ ಅಂತಾ ವಿತರಕ ವಲಯದ ಅಧ್ಯಕ್ಷ ಕೆ ವಿ ಚಂದ್ರಶೇಖರ್ ಪತ್ರದ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ:'ಐ ಮಿಸ್ ಹಿಮ್ ಸೋ ಮಚ್': ಬಹುಭಾಷಾ ನಟಿ ಜಯಪ್ರದಾ ಭಾವುಕ