ನೆಲಮಂಗಲ : ಬೆಂಗಳೂರಿನ ಹೊರವಲಯದ ಪ್ರತಿಷ್ಠಿತ ವಿಲ್ಲಾದ ಸುತ್ತಲು ಕಾಂಪೌಂಡ್, ಟೈಟ್ ಸೆಕ್ಯೂರಿಟಿ, ತಪಾಸಣೆ ಇಲ್ಲದೆ ಯಾರೂ ಸಹ ವಿಲ್ಲಾದೊಳಗೆ ಹೋಗಲು ಸಾಧ್ಯವಿಲ್ಲ. ಆದರೆ, ಈ ಅಬೇಧ್ಯ ಕೋಟೆ ಪ್ರವೇಶಿಸಿದ ಕಳ್ಳ ವಿಲ್ಲಾದೊಳಗೆ ಪ್ರವೇಶಿಸಿ ಸುಮಾರು 54 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಆದರೆ, ಈಗ ಆ ಮನೆಗಳ್ಳನನ್ನು ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರು ಹೊರವಲಯದ ಚಿಕ್ಕ ಬಿದರಕಲ್ಲು ಗ್ರಾಮದ ಗ್ರೋದೇಜ್ ಗೋಲ್ಡ್ ಕೌಂಟಿಯ ಉದ್ಯಮಿ ಚೇತನ್ ವಾಸವಾಗಿದ್ದ 65ನೇ ನಂಬರ್ ವಿಲ್ಲಾದಲ್ಲಿ ಕಳ್ಳತನವಾಗಿದ್ದು, ಉದ್ಯಮಿ ಚೇತನ್ ಕುಟುಂಬ ಸಮೇತ ಸಿಂಗಾಪುರ ಪ್ರವಾಸಕ್ಕೆ ತೆರಳಿದ ಅನಂತರ ಮನೆಗೆ ವಾಪಸ್ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು.
ಲಾಕರ್‌ನಲ್ಲಿಟ್ಟಿದ್ದ ₹54 ಲಕ್ಷ ಮೌಲ್ಯದ 1 ಕೆಜಿ 127 ಗ್ರಾಂ ಚಿನ್ನ, 400 ಗ್ರಾಂ ಬೆಳ್ಳಿ ಮತ್ತು ನಗದು ಕಳವಾಗಿತ್ತು. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ 29/09/2019 ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದಾದ 10 ತಿಂಗಳ ನಂತರ ಕಳವು ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉದ್ಯಮಿ ಚೇತನ್ರವರ ಕಾರ್ ಡ್ರೈವರ್ ಮಂಜು ಕೆ ಹೆಚ್ ಬಂಧಿತ ಆರೋಪಿಯಾಗಿದ್ದಾನೆ.
ಅನುಮಾನ ಬರದಂತೆ ₹54 ಲಕ್ಷ ಚಿನ್ನಾಭರಣ ದೋಚಿದ ಕಳ್ಳ: ಆರೋಪಿ ಮಂಜು ಕೆ ಹೆಚ್ ಉದ್ಯಮಿ ಚೇತನ್ ಜೊತೆ ವಿಲ್ಲಾದೊಳಗೆಲ್ಲ ಓಡಾಡುತ್ತಿದ್ದ. ಈ ಸಮಯದಲ್ಲಿ ಚಿನ್ನಾಭರಣ ದೋಚಲು ಸಂಚು ಹಾಕಿದ್ದ. ಚೇತನ್ ಕುಟುಂಬ ಸಮೇತ ಸಿಂಗಾಪುರ ಪ್ರವಾಸಕ್ಕೆ ತೆರಳಿದ ಸಮಯದಲ್ಲಿ ಕಳ್ಳತನ ನಡೆಸಿದ್ದಾನೆ. ಕಳ್ಳತನ ಕೃತ್ಯದ ಬಗ್ಗೆ ಸಣ್ಣದೊಂದು ಸುಳಿವು ಸಹ ಸಿಗದಂತೆ ಸಾಕಷ್ಟು ಮುಂಜಾಗ್ರತೆ ವಹಿಸಿದ್ದ.
ಉದ್ಯಮಿ ಚೇತನ್ ಚಿನ್ನಾಭರಣ ಇಟ್ಟಿದ್ದ ಸ್ನಾನದ ಕೋಣೆಯಲ್ಲಿ ನೀರಿನ ಸೊರಿಕೆಯಾಗುತ್ತಿದ್ದು, ಇದರ ರಿಪೇರಿಗಾಗಿ ಗೋದ್ರೆಜ್ ಕಂಪನಿಯ 50 ಕಾರ್ಮಿಕರು ಓಡಾಡುತ್ತಿದ್ದರು. ಕಳ್ಳತನಕ್ಕೆ ಸೂಕ್ತ ಸಮಯವೆಂದು ತಿಳಿದು ವಿದ್ಯುತ್ ಕಡಿತಗೊಂಡ ಸಮಯದಲ್ಲಿ ಸಿಸಿ ಕ್ಯಾಮೆರಾ ಕೆಲಸ ಮಾಡದಿದ್ದಾಗ ರಾತ್ರಿ ವೇಳೆ ಸ್ಲೈಡಿಂಗ್ ಕಿಟಕಿ ತೆಗೆದು ಒಳ ನುಗ್ಗಿದ್ದ ಆರೋಪಿ ಲಾಕರ್‌ನಲ್ಲಿಟ್ಟಿದ್ದ 1 ಕೆಜಿ ಚಿನ್ನ, 400 ಗ್ರಾಂ ಬೆಳ್ಳಿ, ನಗದು ಸೇರಿದಂತೆ ಒಟ್ಟು ₹54 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದ.
ಕಳ್ಳತನ ಕೃತ್ಯದಲ್ಲಿ ಬೆರಳು ಮುದ್ರೆಯ ಸುಳಿವು ಸಹ ನೀಡದೆ ಪೊಲೀಸರು ಮತ್ತು ಮಾಲೀಕರಿಗೆ ಸಂಶಯ ಬಾರದಂತೆ ನೋಡಿಕೊಂಡಿದ್ದ. ಕದ್ದ ಚಿನ್ನಾಭರಣವನ್ನು ವಿವಿಧ ಫೈನಾನ್ಸ್‌ಗಳಲ್ಲಿ ಮಾರಾಟ ಮತ್ತು ಅಡವಿಟ್ಟು ಊರಿನಲ್ಲಿ ಮನೆ ಕಟ್ಟಿಸಲು ಮತ್ತು ಮೋಜು, ಮಸ್ತಿಗಾಗಿ ಬಳಸಿದ್ದ.
ಕಳ್ಳನ ಪತ್ತೆಗಾಗಿ ವಿಲ್ಲಾದೊಳಗೆ ಕೆಲಸ ಮಾಡುತ್ತಿದ್ದ 150ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಬಂಧಿತ ಆರೋಪಿಯಿಂದ ಎಲ್ಲಾ ಚಿನ್ನಾಭರಣಗಳನ್ನು ಮಾದನಾಯಕನಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಉದ್ಯಮಿ ಚೇತನ್ ಅವರ ಕುಟುಂಬಕ್ಕೆ ಇವುಗಳನ್ನ ಹಸ್ತಾಂತರಿಸಲಾಗಿದೆ.