ಬೆಂಗಳೂರು : ರಾಜ್ಯದ ಎರಡು ದೊಡ್ಡ ಸಮುದಾಯವನ್ನು ಒಡೆಯುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಸ್ಫಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಅವರ 513ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಂಪೇಗೌಡ, ಬಸವಣ್ಣ, ಕುವೆಂಪು, ಅಂಬೇಡ್ಕರ್‌ಗೆ ಅಪಮಾನವಾಗುತ್ತಿರುವುದು ಇದೇ ಮೊದಲೇನಲ್ಲ.
ಹಲವು ವರ್ಷಗಳಿಂದಲೂ ಇದು ನಡೆಯುತ್ತಾ ಬಂದಿದೆ. ಆದರೆ, ರಾಜ್ಯ ಸರ್ಕಾರ ಇದಕ್ಕೆ ಅವಕಾಶ ನೀಡಬಾರದು. ಆ ದೋಷಗಳನ್ನು ಸರ್ಕಾರ ಸರಿಪಡಿಸಲಿದೆ ಎಂಬ ಭರವಸೆ ಇದೆ ಎಂದು ಹೇಳಿದರು. ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಪಠ್ಯ ಪುಸ್ತಕ ಪರಿಷ್ಕರಣೆಯಂತಹ ಸಮಿತಿಗೆ ಅಧ್ಯಕ್ಷರ ನೇಮಕ ಮಾಡುವಾಗ ತಪ್ಪುಗಳಿಗೆ ಅವಕಾಶ ನೀಡಬಾರದು.
ಎಡ, ಬಲ ಎಂಬ ಸೈದ್ಧಾಂತಿಕ ವ್ಯಕ್ತಿಗಳನ್ನು ಆಯ್ಕೆ ಮಾಡದೇ ನೇರ ಮನಸ್ಥಿತಿಯ ಸ್ಥಿತ ಪ್ರಜ್ಞರನ್ನು ನೇಮಕ ಮಾಡಬೇಕಿತ್ತು. ಅರ್ಹರು ನೇಮಕವಾಗದೇ ಇದ್ದರೆ ವೈಯಕ್ತಿಕ ವಿಲಕ್ಷಣಗಳು ಪಠ್ಯಪುಸ್ತಕದಲ್ಲಿ ಸೇರ್ಪಡೆಯಾಗುತ್ತವೆ. ಮಕ್ಕಳು ತಪ್ಪು ಉತ್ತರ ಬರೆಯಬೇಕಾಗುತ್ತದೆ. ಹೀಗಾಗಿ, ರಾಜ್ಯ ಸರಕಾರ ಈ ತಪ್ಪನ್ನು ಸರಿಪಡಿಸುತ್ತದೆ. ಅಂಬೇಡ್ಕರ್, ಬಸವ, ಕೆಂಪೇಗೌಡ, ಕುವೆಂಪು ಅವರ ಗೌರವವನ್ನು ಎತ್ತಿ ಹಿಡಿಯುತ್ತದೆ ಎಂಬ ವಿಶ್ವಾಸವಿದೆ ಎಂದರು.
ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ಮನವಿ : ವಿಧಾನಸೌಧದ ಯಾವುದಾದರೊಂದು ದ್ವಾರದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಬೇಕು. ನಾವು ಮೊದಲಿನಿಂದಲೂ ಈ ಬೇಡಿಕೆ ಇಟ್ಟಿದ್ದೆವು. ಈಗಾಗಲೇ ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಅನುಮತಿಯನ್ನು ಕೊಟ್ಟಿದೆ. ಅದೇ ರೀತಿ ಕೆಂಪೇಗೌಡರ ಪ್ರತಿಮೆ ನಿರ್ಮಿಸಬೇಕು. ಬಸವಣ್ಣ, ಕೆಂಪೇಗೌಡರು ಬೇರೆ ಬೇರೆಯಲ್ಲ. ತಳಸಮುದಾಯಗಳನ್ನು ಒಟ್ಟು ಮಾಡಿದವರು. ಕೆಂಪೇಗೌಡರ ಹೆಸರನ್ನು ನಮ್ಮ ಮೆಟ್ರೋಗೆ ಇಡಬೇಕು ಎಂದು ಮನವಿ ಮಾಡಿದರು.
ಬಿ.ಎಸ್.ಯಡಿಯೂರಪ್ಪನವರ ಕಾಲದಲ್ಲೇ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ. ಕೆಂಪೇಗೌಡರ ಪ್ರತಿಮೆ ನಿರ್ಮಾಣವಾಗ್ತಿದೆ. ಬೇರೆ ದೇಶಗಳಲ್ಲಿ ಹೆರಿಟೇಜ್ ಸ್ಟ್ರೀಟ್‌ಗಳಿವೆ. ಬೆಂಗಳೂರಿನಲ್ಲೂ ಹೆರಿಟೇಜ್ ಸ್ಟ್ರೀಟ್ ಆಗಬೇಕು ಎಂದರು. ಬೆಂಗಳೂರು ಮಾದರಿಯಾಗಿಟ್ಟುಕೊಂಡು ಲಂಡನ್ನ ಮಾಡೆಲ್ ಸಿಟಿಯಾಗಿ ಮಾಡಲಾಗುತ್ತಿದೆ. ನಾವು ಯಾಕೆ ಇನ್ನಷ್ಟು ಅಭಿವೃದ್ಧಿ ಮಾಡಬಾರದು. ಇನ್ನು ಮೇಕೆದಾಟು ಯೋಜನೆ ಜಾರಿಯಾಗಬೇಕು. ಸಿಎಂ ಬಸವರಾಜ ಬೊಮ್ಮಾಯಿ ದೂರದೃಷ್ಟಿಯಿಂದ ಯೋಜನೆಗಳನ್ನು ಮಾಡುತ್ತಾರೆ ಎಂದು ಹೇಳಿದರು.
ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಅರವತ್ತರ ದಶಕದಲ್ಲಿ ಊಟ ಸಿಗುತ್ತಿರಲಿಲ್ಲ. ನಂತರದಲ್ಲಿ ಆಹಾರ ಭದ್ರತೆ ಸಿಕ್ಕಿದೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದ ನಂತರ ಶಿಕ್ಷಣದಲ್ಲಿ ಸುಧಾರಣೆಯಾಯಿತು. ಎಂಜಿನಿಯರಿಂಗ್, ಇನ್ನಿತರ ಕಾಲೇಜು ನಿರ್ಮಾಣವಾದವು. ಬೆಂಗಳೂರು ಒಂದೂವರೆ ಕೋಟಿ ಜನಸಂಖ್ಯೆಗೆ ತಲುಪಿದೆ. ರೈತರ ಜಮೀನುಗಳು ಮರೆಯಾಗುತ್ತಿವೆ ಎಂದರು.
ಜನಸಂಖ್ಯೆ ಮತ್ತಷ್ಟು ಹೆಚ್ಚಾದರೆ ಭೂಮಿ ಇರುವುದಿಲ್ಲ. ನಾವು ಮತ್ತು ಸಚಿವ ಗೋಪಾಲಯ್ಯ ಕ್ಷೇತ್ರದಲ್ಲಿ ಸರ್ವೆ ಮಾಡಿದ್ವಿ. ಜಮೀನು ಕಳೆದುಕೊಂಡವರು ಅಲ್ಲಿದ್ದರು. ಜಮೀನುದಾರರು ಎಲ್ಲಾ ಕಳೆದುಕೊಂಡು ಸ್ಲಂಗಳಲ್ಲಿ ವಾಸವಿದ್ದಾರೆ ಎಂದರು. ನಮ್ಮ ಮಕ್ಕಳಿಗೆ ಇತಿಹಾಸ ತಿಳಿಸಬೇಕು. ಇಲ್ಲವಾದರೆ ಮಕ್ಕಳು ಎಲ್ಲವನ್ನೂ ಮರೆಯುತ್ತಾರೆ. ಸರ್ಕಾರದ ಜಯಂತಿ ಎಲ್ಲರಿಗೆ ಸೇರಿದವು. ಹಾಗಾಗಿ, ಸಮುದಾಯವರನ್ನಷ್ಟೇ ಕರೆಯಬಾರದು. ಎಲ್ಲರನ್ನು ಇದಕ್ಕೆ ಆಹ್ವಾನಿಸಬೇಕು. ಪಠ್ಯದಲ್ಲಿ ಕೆಂಪೇಗೌಡರನ್ನು ತರಲಾಗಿದೆ. ವಿಧಾನಸೌಧದಲ್ಲಿ ಪ್ರತಿಮೆ ತರಬೇಕು ಎಂದು ಮನವಿ ಮಾಡಿದರು.
ಓದಿ : ಬಹುನಿರೀಕ್ಷಿತ ಕಾಶಿ ಯಾತ್ರೆಗೆ ಅಂತಿಮ ಮಾರ್ಗಸೂಚಿ ಹೊರಡಿಸಿದ ಮುಜರಾಯಿ ಇಲಾಖೆ