ಬೆಂಗಳೂರು: ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರಿಗಾಗಿ ಈಗಾಗಲೇ 340 ಹಾಸಿಗೆಗಳನ್ನು ಮೀಸಲಿಡಲಾಗಿದ್ದು, ಮುಂದಿನ ಎರಡು ವಾರದಲ್ಲಿ ಅವುಗಳನ್ನು 500 ಹಾಸಿಗೆಗಳಿಗೆ ಹೆಚ್ಚಿಸಿ ಸರ್ಕಾರದ ವಶಕ್ಕೆ ನೀಡಲಿದೆ.
ಇಂದು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ ಅವರಿಗೆ ಎಂ.ಎಸ್.ರಾಮಯ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥ ಎಂ.ಆರ್.ಜಯರಾಮ್ ಹಾಗೂ ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ ಮೂರ್ತಿ ಈ ಭರವಸೆ ನೀಡಿದರು.
ಇದೇ ವೇಳೆ ಡಿಸಿಎಂ ಕಾಲೇಜು ಸಿಬ್ಬಂದಿ ಜತೆ ಸಭೆ ನಡೆಸಿದರಲ್ಲದೆ, ಬೋರ್ಡ್ ರೂಂನಿಂದಲೇ ಸಿಸಿಟಿವಿ ಕ್ಯಾಮರಾಗಳ ಮೂಲಕ ಕೋವಿಡ್ ವಾರ್ಡ್ಗಳನ್ನು ವೀಕ್ಷಿಸಿ ಅಲ್ಲಿನ ಅಚ್ಚುಕಟ್ಟುತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪದೇ ಪದೆ ಮನವಿ ಮಾಡಿದರೂ ತಮ್ಮಲ್ಲಿರುವ ಅರ್ಧದಷ್ಟು ಹಾಸಿಗೆಗಳನ್ನು ಸರ್ಕಾರಕ್ಕೆ ನೀಡಲು ಮೀನಾಮೇಷ ಎಣಿಸುತ್ತಿರುವ ಕೆಲ ಖಾಸಗಿ ಆಸ್ಪತ್ರೆಗಳ ನಡುವೆಯೇ ನಾವು ಕೇಳುವುದಕ್ಕೆ ಮುನ್ನವೇ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ, ಹಾಸಿಗೆಗಳನ್ನು ನೀಡಲು ಮುಂದೆ ಬಂದಿರುವ ಎಂ.ಎಸ್.ರಾಮಯ್ಯ ಆಸ್ಪತ್ರೆಯ ಬದ್ಧತೆ ಮತ್ತು ಸೇವಾ ತತ್ಪರತೆಯನ್ನು ಮುಕ್ತಮನಸ್ಸಿನಿಂದ ಮೆಚ್ಚಲೇಬೇಕು ಎಂದು ಡಿಸಿಎಂ ಹೇಳಿದರು.
ಸದ್ಯಕ್ಕೆ 340 ಹಾಸಿಗೆಗಳು ಕೋವಿಡ್ ಸೋಂಕಿತರಿಗೆ ಸಿದ್ಧವಾಗಿ ಬಳಕೆಯಾಗುತ್ತಿವೆ. ಇನ್ನೆರಡು ವಾರದಲ್ಲಿ ಮತ್ತೆ 160 ಹಾಸಿಗೆಗಳು ಲಭ್ಯವಾಗುತ್ತವೆ ಎಂದು ಶ್ರೀನಿವಾಸಮೂರ್ತಿ ಉಪ ಮುಖ್ಯಮಂತ್ರಿ ಗಮನಕ್ಕೆ ತಂದರು.
ವೆಂಟಿಲೇಟರ್ ಸಂಖ್ಯೆ ಹೆಚ್ಚಳ: ಸದ್ಯಕ್ಕೆ ಈ ಆಸ್ಪತ್ರೆಯಲ್ಲಿ ಐದು ವೆಂಟಿಲೇಟರ್ಗಳಿವೆ. ಅವುಗಳ ಸಂಖ್ಯೆಯನ್ನು 25ಕ್ಕೆ ಹೆಚ್ಚಿಸಬೇಕು. 50 ಐಸಿಯು ಬೆಡ್ಗಳನ್ನು ಕನಿಷ್ಠ 100ರಿಂದ 150 ಮಾಡಬೇಕು ಎನ್ನುವ ಕುರಿತು ಚರ್ಚೆ ನಡೆಯಿತು. ಕೋವಿಡ್ ಕಾರಣಕ್ಕೆ ಕೊರತೆ ಇರುವ 10 ವೆಂಟಿಲೇಟರ್ ಮತ್ತು 10 ಡಯಾಲಿಸಿಸ್ ಯಂತ್ರಗಳನ್ನು ದಾನಿಗಳಿಂದ ಕೊಡಿಸುವುದಾಗಿ ಡಿಸಿಎಂ ಭರವಸೆ ನೀಡಿದರು.
ಇದರ ಜತಗೆ ರೋಗಿಗಳಿಗೆ ಆಮ್ಲಜನಕ ಒದಗಿಸುವ 20 ಹೆಚ್ಎಫ್ಎನ್ಸಿ ಯಂತ್ರಗಳು ಕೂಡ ಒದಗಿಸಲಾಗುವುದು. ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸಾಗುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲಿ ಎನ್ನುವ ಕಾರಣಕ್ಕೆ ಇಷ್ಟೂ ಉಪಕರಣಗಳನ್ನು ಕೊಡಿಸಲಾಗುತ್ತಿದೆ ಎಂದರು.
ಔಷಧ ಪೂರೈಕೆ: ಕೋವಿಡ್ ಸೋಂಕಿತರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ’ರೆಮೀಡಿಸ್ ಸ್ವೀರ್’ ಎಂಬ ಚುಚ್ಚುಮದ್ದಿನ ಕೊರತೆ ಇದ್ದು, ಅದನ್ನು ಸರ್ಕಾರ ಪೂರೈಸಬೇಕು ಎಂದು ಆಸ್ಪತ್ರೆ ಆಡಳಿತ ವರ್ಗ ಮನವಿ ಮಾಡಿದೆ. ಇದಕ್ಕೂ ಸ್ಪಂದಿಸಿದ ಡಿಸಿಎಂ, ಅಗತ್ಯವಿರುವಷ್ಟು ಚುಚ್ಚುಮದ್ದು, ಮತ್ತಿತರೆ ಎಲ್ಲಾ ಔಷಧಗಳನ್ನು ಕೂಡಲೇ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಿಬ್ಬಂದಿ ಕೊರತೆ: ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಒಟ್ಟು ಸಿಬ್ಬಂದಿಯ ಪೈಕಿ ಶೇ. 10ರಷ್ಟು ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲುತ್ತಿದೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಚಿಕಿತ್ಸೆ ವೇಳೆ ಸೋಂಕು ತಗುಲುತ್ತಿದೆ. ಆದರೂ ನಮ್ಮ ಸಿಬ್ಬಂದಿ ಛಲದಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈಗ ಆಸ್ಪತ್ರೆಯಲ್ಲಿ ವೈದ್ಯರು, ಅರೆ ವ್ಯದ್ಯಕೀಯ ಸಿಬ್ಬಂದಿ ಕೊರತೆ ಇದೆ ಎಂದು ಸಿಇಒ ಶ್ರೀನಿವಾಸಮೂರ್ತಿ ಹೇಳಿದರು.