ಬೆಂಗಳೂರು: ಸೈಬರ್ ಕ್ರೈಂ ಇದೀಗ ಯಾರಿಗೆ ಗೊತ್ತಿಲ್ಲ ಹೇಳಿ. ಇಂದಿನ ಹೈಟೆಕ್ ಜಮಾನದಲ್ಲಿ ಟೆಕ್ನಾಲಜಿ ಹೆಚ್ಚು ಬಳಕೆಯಾಗುತ್ತಿದ್ದಂತೆ ದುರ್ಬಳಕೆ ಪ್ರಮಾಣವು ಅಧಿಕವಾಗುತ್ತಿದೆ. ಕಾಲ ಬದಲಾದಂತೆ ಸೈಬರ್ ಚೋರರು ಹೊಸ ಹೊಸ ಐಡಿಯಾ ಬಳಸಿ ಹಣ ಲೂಟಿ ಹೊಡೆಯುವ ಮಾರ್ಗ ಕಂಡು ಕೊಂಡಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ರಾಜಧಾನಿಯಲ್ಲಿ 50 ಸಾವಿರಕ್ಕಿಂತ ಹೆಚ್ಚು ಸೈಬರ್ ಪ್ರಕರಣಗಳು ದಾಖಲಾಗಿರುವುದೇ ಚೋರರ ಚಾಣಾಕ್ಷತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಡಿಜಿಟಲ್ ವಹಿವಾಟು: ತರಕಾರಿ ಖರೀದಿಯಿಂದ ಹಿಡಿದು ಸಿನಿಮಾ ಬುಕ್ ಮಾಡುವವರೆಗೂ ಎಲ್ಲವೂ ಇಂದು ಆನ್ಲೈನ್ ಮಯವಾಗಿದೆ. ಹಣಕಾಸಿನ ವಹಿವಾಟು ಡಿಜಿಟಲ್ ರೂಪದಲ್ಲಿ ಬಹುತೇಕ ನಡೆಯುತ್ತಿದೆ. ಡೆಬಿಟ್ ಕಾರ್ಡ್, ಒಟಿಪಿ, ಬಹುಮಾನದ ಆಸೆ ಹೀಗೆ.. ನಾನಾ ತರಹದ ಕಾರಣಗಳನ್ನು ನೀಡಿ ಜನರನ್ನು ಮಂಕುಬೂದಿ ಎರಚಿ ಕೋಟ್ಯಂತರ ರೂ. ಹಣವನ್ನ ಸೈಬರ್ ಖದೀಮರು ಲೂಟಿ ಮಾಡಿದ್ದಾರೆ ಮತ್ತು ಮಾಡ್ತಿದ್ದಾರೆ.
ಏಳು ವರ್ಷಗಳಲ್ಲಿ 50 ಸಾವಿರ ಪ್ರಕರಣ: ಆನ್ಲೈನ್ ವಂಚನೆ ಪ್ರಕರಣ ಹೆಚ್ಚಾಗುತ್ತಿದ್ದಂತೆ ಬೆಂಗಳೂರು ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ 2017ರ ಮಾರ್ಚ್ನಲ್ಲಿ ಸೈಬರ್ ಕೈಂ ಪೊಲೀಸ್ ಠಾಣೆ ತೆರೆಯಲಾಯಿತು. ಇದಾದ ಕೆಲ ವರ್ಷಗಳಲ್ಲಿ ನಗರದ ವಲಯಕ್ಕೊಂದರಂತೆ 8 ಸೈಬರ್, ಆರ್ಥಿಕ, ನಾರ್ಕೋಟಿಕ್ಸ್ ವಿಭಾಗದ (ಸೆನ್ ) ಪೊಲೀಸ್ ಠಾಣೆಗಳನ್ನ ತೆರೆದು ದೂರು ದಾಖಲಿಸುವ ಕೆಲಸವಾಯಿತು. ವರ್ಷದಿಂದ ವರ್ಷಕ್ಕೆ ದಾಖಲಾಗುವ ಆನ್ಲೈನ್ ವಂಚನೆ ಪ್ರಕರಣಗಳು ಅಧಿಕವಾಗುತ್ತಲೇ ಇದೆ. ಕಳೆದ ಏಳು ವರ್ಷಗಳಲ್ಲಿ 50027 ಪ್ರಕರಣ ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ನೀಡಿದ ಅಂಕಿ - ಅಂಶಗಳೇ ಪುಷ್ಟಿಕರಿಸಿದೆ.
ಡಿಜಿಟಲ್ ಪ್ರಪಂಚದಲ್ಲಿ ವಂಚನೆ ಮಾಮೂಲಿ: ಡಿಜಿಟಲ್ ಪ್ರಪಂಚದಲ್ಲಿ ಸೈಬರ್ ಕ್ರೈಂ ವಂಚನೆ ಮಾಮೂಲಿಯಂತಾಗಿದೆ. ಎಲ್ಲೋ ಕುಳಿತು ಜಗತ್ತಿನ ಯಾವುದೇ ಮೂಲೆಯ ಜನರಿಗೂ ಮೋಸ ಮಾಡುವುದನ್ನ ಖದೀಮರು ಕರಗತ ಮಾಡಿಕೊಂಡಿದ್ದಾರೆ. ಹೊಸ ಹೊಸ ವಿಧಾನ ಬಳಸಿ ಆಯಾ ಕಾಲಕ್ಕೆ ಅನುಗುಣವಾಗಿ ಸಾರ್ವಜನಿಕರನ್ನು ತಮ್ಮತ್ತ ಸೆಳೆದು ಅವರನ್ನು ನಂಬಿಸಿ ಕೋಟ್ಯಂತರ ರೂಪಾಯಿ ಹಣವನ್ನ ಕ್ಷಣಾರ್ಧದಲ್ಲೇ ವಂಚಿಸಿದ್ದಾರೆ.
ಪ್ರತಿ ವರ್ಷ ದಾಖಲಾದ ಪ್ರಕರಣಗಳ ವಿವರ: 2017 ರಲ್ಲಿ 2742 ಪ್ರಕರಣ ದಾಖಲಾದರೆ, 2018 ರಲ್ಲಿ 5252, 2019 ರಲ್ಲಿ ದಾಖಲೆಯ 10553 ಪ್ರಕರಣ ದಾಖಲಾಗಿವೆ. ಕಳೆದ ವರ್ಷ 9940 ಕೇಸ್ ದಾಖಲಾದರೆ.. 2023 ಜೂನ್ ಅಂತ್ಯದವರೆಗೆ ನಗರದಲ್ಲಿ 6226 ಪ್ರಕರಣ ದಾಖಲಾಗಿವೆ.
ಡೆಬಿಟ್ / ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ವಂಚನೆ : ಕಳೆದ ಏಳು ವರ್ಷಗಳಲ್ಲಿ ದಾಖಲಾಗಿರುವ ನಾನಾ ತರಹದ ಪ್ರಕರಣಗಳನ್ನ ಪರಿಶೀಲಿಸಿದರ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ಅತಿ ಹೆಚ್ಚು ವಂಚನೆ ಪ್ರಕರಣ ದಾಖಲಾಗಿರುವುದು ಕಂಡುಬಂದಿದೆ. ಒಟ್ಟು 20662 ಪ್ರಕರಣಗಳು ದಾಖಲಾಗಿವೆ.
ಬಹುತೇಕರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ಖಾತೆದಾರರ ಪಾಸ್ ವರ್ಡ್, ಒಟಿಪಿ ಸೇರಿದಂತೆ ವೈಯಕ್ತಿಕ ವಿವರ ಸಂಗ್ರಹಿಸುವ ಖದೀಮರು ಕ್ಷಣಾರ್ಧದಲ್ಲಿ ಹಣ ಎಗರಿಸುವ ಕಲೆ ಸಿದ್ದಿಸಿಕೊಂಡಿದ್ದಾರೆ. 2022ರಲ್ಲಿ 4252 ಕೇಸ್ ದಾಖಲಾದರೆ, ಈ ವರ್ಷ ಮೊದಲ ಐದು ತಿಂಗಳಲ್ಲಿ 1872 ಪ್ರಕರಣ ದಾಖಲಾಗಿರುವುದು ಕಳವಳಕಾರಿಯಾಗಿದೆ.
ಗಿಫ್ಟ್ ಸೋಗಿನಲ್ಲಿ ವಂಚನೆ: ಮುಂಗಡವಾಗಿ ಉಚಿತ ಗಿಫ್ಟ್ ನೀಡುವ ಸೋಗಿನಲ್ಲಿ ಸಾರ್ವಜನಿಕರನ್ನು ಯಾಮಾರಿಸಿದ ಪ್ರಕರಣಗಳು ಹೆಚ್ಚಾಗಿವೆ. ಏಳು ವರ್ಷಗಳಲ್ಲಿ 9198 ಕೇಸ್ ದಾಖಲಾಗಿವೆ. ಕಾರ್ಡ್ ಸ್ಕಿಮ್ಮಿಂಗ್ (5012), ಉದ್ಯೋಗ ವಂಚನೆ (4453), ಸೋಷಿಯಲ್ ಮೀಡಿಯಾ ಮುಖಾಂತರ ಅಪರಾಧ ವಂಚನೆ ಸಂಬಂಧಿಸಿದಂತೆ ನಗರದಲ್ಲಿ 2378 ಪ್ರಕರಣ ದಾಖಲಾಗಿವೆ.
ಓದಿ: ಕಾಂಗ್ರೆಸ್ನ 5 ಗ್ಯಾರಂಟಿ ಪಡೆಯಲು ಆಧಾರ್ನೊಂದಿಗೆ ದಾಖಲೆ ಜೋಡಣೆ ವದಂತಿ: ಸೈಬರ್ ಕೆಫೆಗಳ ಮೇಲೆ ಪೊಲೀಸರ ದಾಳಿ