ಬೆಂಗಳೂರು : ಲಾಕ್‌ಡೌನ್ ಆದ ಬಳಿಕ ಒಂದೊಂದಾಗಿ ಕಳ್ಳತನದ ಕೃತ್ಯ ಬೆಳಕಿಗೆ ಬರುತ್ತಿವೆ. ಲಾಕ್‌ಡೌನ್ ಇದ್ದ ಕಾರಣ ಊರುಗಳಿಗೆ ಹೋಗಿದ್ದ ಜನರೆಲ್ಲರು ಈಗ ನಗರದತ್ತ ಬರುತ್ತಿದ್ದಂತೆ ದೂರು ಕೊಡೋದಕ್ಕೆ ಶುರು ಮಾಡಿದ್ದಾರೆ. ಒಂದೇ ವಾರದಲ್ಲಿ ಸಾಕಷ್ಟು ಮನೆಗಳ್ಳತನ ಪ್ರಕರಣ ಬಯಲಿಗೆ ಬಂದಿವೆ. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ನಿರತರಾಗಿದ್ದಾರೆ.
ಉತ್ತರ ವಿಭಾಗದ ನಾಲ್ಕು ಪೊಲೀಸ್ ಠಾಣೆಗಳಿಂದ ಕಳ್ಳರ ಬಂಧನ ಕಾರ್ಯಾಚರಣೆ ನಡೆದಿದೆ. ಗಂಗಮ್ಮನಗುಡಿ, ನಂದಿನಿಲೇಔಟ್, ಬಗಲಗುಂಟೆ ಮತ್ತು ಆರ್ಟಿನಗರದಲ್ಲಿ ಮನೆಗಳ್ಳತನ ದೂರು ದಾಖಲಾಗಿದ್ದರಿಂದ ಕಾರ್ಯಾಚರಣೆ ನಡೆಸಿದ ಪೊಲೀಸರು, ಒಟ್ಟು 50 ಲಕ್ಷ ಮೌಲ್ಯದ ಚಿನ್ನಾಭರಣವನ್ನ ವಶಪಡಿಸಿಕೊಂಡು ಐವರು ಆರೋಪಿಗಳನ್ನ ಬಂಧಿಸಿದ್ದಾರೆ.
ನಿರ್ಮಲ, ಸೈಯದ್, ನಾಗೇಶ್, ಜಗದೀಶ್ ಮತ್ತು ಸಂತೋಷ್ ಎಂಬ ಐವರು ಆರೋಪಿಗಳನ್ನು ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತ ನಿರ್ಮಲ ತನ್ನನ್ನು ಕೆಲಸಕ್ಕಿಟ್ಟುಕೊಂಡಿದ್ದ ವೃದ್ಧೆಯೊಬ್ಬರ ಮನೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕಳ್ಳತನ ನಡೆಸುತ್ತಲೇ ಬಂದಿದ್ದಳು.
ಸಣ್ಣಪುಟ್ಟ ಒಡವೆಗಳನ್ನ ಕದಿಯುತ್ತಿದ್ದಳು. ಆದರೆ, ಪೂಜೆಯ ಸಾಮಗ್ರಿಗಳು ಯಾವಾಗ ಕಳುವಾಯ್ತೋ ಆಗ ವೃದ್ಧೆ ಬೇರೆ ಮನೆಯಲ್ಲಿದ್ದ ತನ್ನ ಮಗನಿಗೆ ವಿಷಯ ಮುಟ್ಟಿಸಿದ್ರು. ವೃದ್ಧೆಯ ಮಗ ದೂರು ನೀಡಿದ ಹಿನ್ನೆಲೆ ಮನೆ ಕೆಲಸದಾಕೆ ನಿರ್ಮಲಳನ್ನು ಬಂಧಿಸಲಾಗಿದೆ. ಇವಳಿಂದ ಒಟ್ಟು140 ಗ್ರಾಂ ಚಿನ್ನ, 1200 ಗ್ರಾಂ ಬೆಳ್ಳಿ ತಟ್ಟೆಗಳನ್ನ ವಶಕ್ಕೆ ಪಡೆದಿದ್ದಾರೆ.
ಏರ್ಫೋರ್ಸ್ಗೆ ನುಗ್ಗಿದ್ದ ವ್ಯಕ್ತಿಯೊಬ್ಬನನ್ನ ಏರ್ಫೋರ್ಸ್ ಅಧಿಕಾರಿಗಳು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಗಾಂಜಾ ಸೇವಿಸುತ್ತಿದ್ದ ಕಾರಣ ಪೊಲೀಸರು ಈತನ ಬೆನ್ನತ್ತಿದ್ದರು. ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಏರ್ಫೋರ್ಸ್ ಕಾಂಪೌಂಡ್ ಒಳಗೆ ನುಗ್ಗಿ ತಪ್ಪಿಸಿಕೊಳ್ಳಲು ಮುಂದಾಗಿದ್ದ.
ನಂತರ ಪೊಲೀಸರ ಸುಪರ್ದಿಗೆ ಬಂದ ಬಳಿಕ ಆತನನ್ನ ವಿಚಾರಣೆ ನಡೆಸಿ 17 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಕ್ಯಾಮೆರಾವನ್ನ ವಶಕ್ಕೆ ಪಡೆಯಲಾಗಿದೆ. ಈತನ ವಿರುದ್ಧ ಹತ್ತಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.
ಲಾಕ್‌ಡೌನ್ ಸಂದರ್ಭದಲ್ಲಿ ಕೇರಳಕ್ಕೆ ಹೋಗಿದ್ದವರ ಮನೆಗೆ ಕನ್ನ ಹಾಕಿದ ಕಳ್ಳರೂ ಕೂಡ ಸಿಕ್ಕಿಬಿದ್ದಿದ್ದಾರೆ. ಇನ್ನು ಹಲವು ಕಳ್ಳರ ಹೆಡೆಮುರಿ ಕಟ್ಟುವುದು ಬಾಕಿ ಇದ್ದು, ಖಾಕಿ ಪಡೆ ಅವರಿಗಾಗಿ ಬಲೆ ಬೀಸಿದೆ.