ಆನೇಕಲ್ (ಬೆಂಗಳೂರು): ತಾಲೂಕಿನ ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಪಟಾಕಿ ತುಂಬಿ ನಿಲ್ಲಿಸಿದ್ದ ವಾಹನಗಳನ್ನು ಇಂದು ಜಪ್ತಿ ಮಾಡಲಾಯಿತು. ಪುರಸಭೆಯ ಮುಖ್ಯಾಧಿಕಾರಿ ಶ್ವೇತ ಬಾಯಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಪಟಾಕಿ ತುಂಬಿದ್ದ 5 ಲಾರಿಗಳನ್ನು ವಶಕ್ಕೆ ಪಡೆದರು. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಎರಡು, ಮೂರು ದಿನಗಳಿಂದ ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿರುವ ಪಟಾಕಿ ಮಳಿಗೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಕಾನೂನು ಉಲ್ಲಂಘಿಸಿ ಪಟಾಕಿ ಸಂಗ್ರಹಿಸಿರುವ ಮಳಿಗೆಗಳನ್ನು ಜಪ್ತಿ ಮಾಡುತ್ತಿದ್ದೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಶ್ವೇತಾ ಬಾಯಿ ತಿಳಿಸಿದರು.
ಪುರಸಭೆ ವ್ಯಾಪ್ತಿಯ ರಾಮಸಾಗರ ಸರ್ವೆ ನಂ 105ರ ಹನುಮರೆಡ್ಡಿ ಬಿನ್ ನಾರಾಯಣರೆಡ್ಡಿ ಅವರ ಹಳೆಯ ಶಾಲಾ ಆವರಣದಲ್ಲಿ ಲಾರಿಗಳಲ್ಲಿ ಅಕ್ರಮವಾಗಿ ಪಟಾಕಿ ತುಂಬಿರುವ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆವು. ಚಂದಾಪುರದಲ್ಲಿ ನಿಯಮ ಉಲ್ಲಂಘಿಸಿ ಸಂಗ್ರಹಿಸಲಾಗಿದ್ದ ಪಟಾಕಿ ಮಳಿಗೆಯನ್ನು ಜಪ್ತಿ ಮಾಡಲಾಗಿದೆ. ಲಾರಿ ಚಾಲಕರು ಪರಾರಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ದಾಳಿಗೆ ಸಂಬಂಧಿಸಿದಂತೆ 30 ರಿಂದ 40 ಲಕ್ಷ ರೂ ಮೌಲ್ಯದ ಪಟಾಕಿ ಲಾರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಚಂದಾಪುರ-ಬೆಂಗಳೂರು ಮುಖ್ಯ ಹೆದ್ದಾರಿಯ ಸರ್ವೀಸ್ ರಸ್ತೆಯ ಪಟಾಕಿ ಮಳಿಗೆಗಳಿಗೆ ಬೀಗ ಹಾಕಲಾಗಿದೆ. ದಾಳಿಯಲ್ಲಿ ಸೂರ್ಯನಗರ ಇನ್ಸ್‌ಪೆಕ್ಟರ್ ಸಂಜೀವ್ ಕುಮಾರ್ ಜೆ.ಮಹಾಜನ್, ಅಗ್ನಿಶಾಮಕ ದಳದ ಅಧಿಕಾರಿ ಆರಾಧ್ಯ, ಎಸ್ಐ ಬಸವರಾಜ್ ಸವಟಗಿ, ಹೆಚ್ಸಿ ಲಕ್ಷ್ಮಿಪತಿ, ಪಿ.ಸಿ.ಹಾಜಿ ಮಲ್ಲಂಗ, ಆರೋಗ್ಯಾಧಿಕಾರಿ ಅಮೃತ ಮತ್ತು ಗ್ರಾಮ ಲೆಕ್ಕಿಗರು ಪವಿತ್ರ ಭಾಗವಹಿಸಿದ್ದರು. ಸೂರ್ಯನಗರ ಠಾಣೆಯಲ್ಲಿ ಪುರಸಭಾಧಿಕಾರಿ ದೂರು ನೀಡಿದ್ದು ಜಮೀನು ಮಾಲೀಕರ ವಿರುದ್ಧ ಅಕ್ರಮ ಪಟಾಕಿ ಸಂಗ್ರಹ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಇದನ್ನೂಓದಿ: ಅತ್ತಿಬೆಲೆ ಪಟಾಕಿ ದುರಂತ ಪ್ರಕರಣ ಸಿಐಡಿಗೆ ಹಸ್ತಾಂತರ: ಸಿಎಂ ಸಿದ್ದರಾಮಯ್ಯ