ಬೆಂಗಳೂರು: ನಗರದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಇಂದು ಮತ್ತೆ ಐವರು ಪೊಲೀಸರಲ್ಲಿ ಸೋಂಕು ದೃಢವಾಗಿದೆ.
ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಮಹಿಳಾ ಪಿಎಸ್ ಐ ಹಾಗೂ ಒಬ್ಬ ಕಾನ್ಸ್ಟೇಬಲ್ಗೆ ಸೋಂಕು ಪತ್ತೆಯಾಗಿದೆ. ಇನ್ನು ಕೊರೊನಾ ಪತ್ತೆಯಾದ ಸಿಬ್ಬಂದಿ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ನಿನ್ನೆಯೂ ಕೂಡ ಕರ್ತವ್ಯ ನಿರ್ವಹಿಸುತ್ತಿದ್ದರು. ಸದ್ಯ ಕೊರೊನಾ ಲಕ್ಷಣ ಕಂಡುಬಂದ ಕಾರಣ ಸಂಬಂಧಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಒಂದೇ ಠಾಣೆಯಲ್ಲಿ ಒಟ್ಟು 8 ಕೊರೊನಾ ಪ್ರಕರಣಗಳು ದಾಖಲಾಗಿವೆ.
ಕಲಾಸಿಪಾಳ್ಯ ಠಾಣೆ: ಕಲಾಸಿಪಾಳ್ಯ ಠಾಣೆಯ ಸುತ್ತ ಹಲವಾರು ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿರುವ ಕಾರಣ, ಈಗಾಗಲೇ ಈ ಏರಿಯಾವನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ. ಸದ್ಯ ಠಾಣೆ ಕೂಡ ಕೊರೊನಾ ಹಾಟ್ ಸ್ಪಾಟ್ ಆಗುತ್ತಿದ್ದು, ಬಹಳಷ್ಟು ಸಿಬ್ಬಂದಿಗೆ ಕೊರೊನಾ ದೃಢವಾಗಿದೆ. ಅಲ್ಲದೇ ಇಂದು ಮತ್ತೊಬ್ಬ ಸಿಬ್ಬಂದಿಗೆ ವೈರಸ್ ಪತ್ತೆಯಾಗಿದೆ.
ಬೆಂಗಳೂರು ಎಸಿಬಿ ಕಚೇರಿ ಸೀಲ್ಡೌನ್: ನಗರದ ಎಸಿಬಿ ಕಚೇರಿಯಲ್ಲಿ ಹಿರಿಯ ಅಧಿಕಾರಿಯೊಬ್ಬರ ಗನ್ಮ್ಯಾನ್ಗೆ ನಿನ್ನೆ ಸಂಜೆ ಸೋಂಕು ಇರುವುದು ಧೃಡವಾಗಿದೆ. ಈ ಹಿನ್ನೆಲೆ ಇಂದಿನಿಂದ ಎಸಿಬಿ ಕಚೇರಿ ಮೂರು ದಿನಗಳ ಕಾಲ ಸೀಲ್ಡೌನ್ ಆಗಲಿರುವುದರಿಂದ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ.
ಚಾಮರಾಜ ಪೇಟೆ ಠಾಣೆಯಲ್ಲಿ ಕೊರೊನಾ: ಇಲ್ಲಿನ ಠಾಣೆ ಕಾನ್ಸ್‌ಟೇಬಲ್ ಓರ್ವರಿಗೆ ಕೊರೊನಾ ಸೋಂಕು ಧೃಡವಾಗಿದ್ದು, ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಠಾಣೆಯಲ್ಲಿ ಕಾನ್ಸ್‌ಟೇಬಲ್ ಜೊತೆ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದೆ.
ನಗರದಲ್ಲಿ ಈವರೆಗೆ ಒಟ್ಟು 121 ಪೊಲೀಸರಿಗೆ ಸೋಂಕು ತಗುಲಿದ್ದು, ಇವರ ಪೈಕಿ 11 ಮಂದಿ ಗುಣಮುಖರಾಗಿದ್ದರೆ ನಾಲ್ವರು ಸಾವನ್ನಪ್ಪಿದ್ದಾರೆ. ಹಿರಿಯ ಅಧಿಕಾರಿಗಳು ಎಷ್ಟೇ ಧೈರ್ಯ ಹೇಳಿದರೂ ಸಿಬ್ಬಂದಿಯಲ್ಲಿ ಮಾತ್ರ ಆತಂಕ ಮನೆಮಾಡಿದೆ.