ಆನೇಕಲ್: ಕೊರೊನಾ ಪಾಸಿಟಿವ್ ಕಂಡುಬಂದಿದ್ದ ಹೆನ್ನಾಗರದ ಮಹಿಳೆಯ ಕುಟುಂಬದ ನಾಲ್ವರಲ್ಲಿ ಸೋಂಕು ಕಂಡುಬಂದಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲೂಕಿನಲ್ಲಿ ಶನಿವಾರ ಒಟ್ಟೂ 5 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ಮಹಿಳೆಯ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಮಂದಿಯಲ್ಲಿ ಸ್ವಂತ ಕುಟುಂಬದವರೇ ಆದ ಆರು ಮಂದಿಯನ್ನು ಅವರ ವಿಶಾಲವಾದ ಮನೆಯ ಪ್ರತ್ಯೇಕ ಕೋಣೆಗಳಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅವರಲ್ಲಿ ನಾಲ್ವರಿಗೆ ಪಾಸಿಟಿವ್ ಬಂದಿದೆ. ಉಳಿದ ಇಬ್ಬರನ್ನು ಕೂಡ ಆಸ್ಪತ್ರೆಗೆ ರವಾನಿಸಲಾಗಿದ್ದು ಅವರ ಸ್ಕ್ವಾಬ್ ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಇತರರು ಆಸ್ಪತ್ರೆ ಸಿಬ್ಬಂದಿಯಾಗಿದ್ದು, ಅವರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.
ಮಹಿಳೆಯ ಕುಟುಂಬದ ಇಬ್ಬರು ಬಾಲಕರು, 65 ವರ್ಷ ಮತ್ತು 38 ವರ್ಷದ ಇಬ್ಬರು ವ್ಯಕ್ತಿಗಳಿಗೆ ಸೋಂಕು ತಗುಲಿದೆ.
ಮತ್ತೊಂದು ಪಾಸಿಟಿವ್:
ಹಾಗೆಯೇ ಪಶ್ಚಿಮ ಬಂಗಾಳದಿಂದ ಬಂದು ಚಂದಾಪುರ ಭಾಗದಲ್ಲಿ ಕ್ವಾರಂಟೈನ್ ಆಗಿದ್ದ ಒಬ್ಬ ವ್ಯಕ್ತಿಗೆ ಪಾಸಿಟಿವ್ ದೃಢಪಟ್ಟಿದ್ದು, ಆತನನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ.