ಬೆಂಗಳೂರು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್ಸಿ)ನಿಂದ ಸುಮಾರು 425 ಕೋಟಿ ರೂ. ದೇಣಿಗೆ ಸಂಗ್ರಹವಾಗಿದ್ದು, 800 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲಿದೆ. ಸಂಶೋಧನೆ, ಶಿಕ್ಷಣ, ವಿಜ್ಞಾನ ಮತ್ತು ಇಂಜಿನಿಯರಿಂಗ್ಗೆ ಒತ್ತು ನೀಡುವ ಭಾರತದ ಮುಂಚೂಣಿ ಸಂಸ್ಥೆ ಐಐಎಸ್ಸಿ ತನ್ನ ಬೆಂಗಳೂರು ಕ್ಯಾಂಪಸ್‌ನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದಿಗೆ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಸ್ಕೂಲ್ ಪ್ರಾರಂಭಿಸಲು ಮುಂದಾಗಿದೆ.
ಆಸ್ಪತ್ರೆಯಲ್ಲಿ ಹಾಗೂ ಐಐಎಸ್ಸಿಯ ವಿಜ್ಞಾನ ಮತ್ತು ಇಂಜಿನಿಯರಿಂಗ್ ಪ್ರಯೋಗಾಲಯಗಳಲ್ಲಿ ವಿದ್ಯಾರ್ಥಿಗಳು ಏಕಕಾಲಕ್ಕೆ ತರಬೇತಿ ಪಡೆಯಲಿದ್ದಾರೆ. ಇದು ಮಲ್ಟಿ ಆಸ್ಪತ್ರೆಯಾಗಿದ್ದು, ಶೈಕ್ಷಣಿಕ ಕಾರ್ಯಕ್ರಮದ ಕ್ಲಿನಿಕಲ್ ತರಬೇತಿ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಪೂರೈಸಬಹುದು.
ಇದಕ್ಕಾಗಿ ದಾನಿಗಳಾದ ಸುಸ್ಮಿತಾ ಮತ್ತು ಸುಬ್ರತೊ ಬಾಗ್ಚಿ, ರಾಧಾ ಹಾಗೂ ಎನ್‌ಎಸ್ ಪಾರ್ಥ ಸಾರಥಿ ದಂಪತಿಗಳು ಒಟ್ಟಾಗಿ 425 ಕೋಟಿ ರೂ.ಗಳನ್ನು (60ಮಿಲಿಯನ್ ಡಾಲರ್) ದೇಣಿಗೆ ನೀಡಿದ್ದಾರೆ. ಐಐಎಸ್ಸಿ ಸ್ಥಾಪನೆಯಾದ ನಂತರ ಇದೊಂದೆ ದೊಡ್ಡ ಮೊತ್ತದ ಖಾಸಗಿ ದೇಣಿಗೆಯಾಗಿದೆ. ಈ ಆಸ್ಪತ್ರೆಯನ್ನು ಬಾಗ್ಚಿ - ಪಾರ್ಥಸಾರಥಿ ಆಸ್ಪತ್ರೆ ಎಂದು ಕರೆಯಲಾಗುತ್ತದೆ.
ಈ ಕುರಿತು ಐಐಎಸ್ಸಿ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ಮಾತನಾಡಿದ್ದು, ಸುಸ್ಮಿತಾ ಮತ್ತು ಸುಬ್ರತೊ ಬಾಗ್ಚಿ ಹಾಗೂ ರಾಧಾ ಮತ್ತು ಎನ್ಎಸ್ ಪಾರ್ಥಸಾರಥಿ ಅವರ ಉದಾತ್ತ ನಡೆಗೆ ಅತ್ಯಂತ ಅಭಾರಿಯಾಗಿದ್ದೇವೆ. ಆಸ್ಪತ್ರೆಯ ಕಾಮಗಾರಿಯೂ ಮುಂದಿನ ಜೂನ್ನಲ್ಲಿ ಆರಂಭವಾಗಿ 2024ಕ್ಕೆ ಮುಕ್ತಾಯವಾಗಲಿದೆ. ಸುಮಾರು 15 ಎಕರೆಯಲ್ಲಿ ಬೆಂಗಳೂರು ಕ್ಯಾಂಪಸ್‌ನಲ್ಲಿ ನಿರ್ಮಾಣ ವಾಗಲಿದೆ. ಇನ್ನು ಐಐಎಸ್ಸಿ ಪ್ರಮುಖ ಆಕರ್ಷಣೆಯ ಹಸಿರು ಪರಿಸರದೊಂದಿಗೆ ಕೂಡಿಕೊಂಡಿದ್ದು, ಇದಕ್ಕೆ ಧಕ್ಕೆಯಾಗದಂತೆ ನಿರ್ಮಾಣ ಮಾಡಲಾಗುವುದು ಎಂದರು.
ದಾನಿಗಳಲ್ಲಿ ಒಬ್ಬರಾದ ಪಾರ್ಥಸಾರಥಿ ಮಾತನಾಡಿ, ವಿಜ್ಞಾನ, ಇಂಜಿನಿಯರಿಂಗ್ ಮತ್ತು ಮೆಡಿಸನ್ ಅನ್ನು ಒಂದೇ ಕ್ಯಾಂಪಸ್‌ನಲ್ಲಿ ಅಳವಡಿಸುವ, ಐಐಎಸ್ಸಿಯ ಗುರಿ ಭಾರತಕ್ಕೆ ಅತ್ಯಂತ ಹೊಸದಾಗಿದೆ. ಇದು ನಮಗೆ ಸಹಯೋಗಕ್ಕೆ ಅತ್ಯಂತ ಉತ್ಸಾಹಕರ ಅವಕಾಶವಾಗಿದೆ. ಐಐಎಸ್ಸಿಯ ಜಾಗತಿಕ ಪ್ರತಿಷ್ಠೆ ಮತ್ತು ಜಾಲವು ಜನ ಸಮೂಹಕ್ಕೆ ಪರಿಣಾಮ ಬೀರುವ ಮಹತ್ತರವಾದ ಸಂಶೋಧನೆ ಮತ್ತು ಔಷಧಗಳ ಪೂರೈಕೆ ಮಾಡುವ ಅಸಾಧಾರಣ ಪ್ರತಿಭೆಯನ್ನು ಆಕರ್ಷಿಸುತ್ತದೆ ಎಂದರು.
ಏನೆಲ್ಲ ಇರಲಿದೆ ಆಸ್ಪತ್ರೆಯಲ್ಲಿ: ಬಾಗ್ಚಿ - ಪಾರ್ಥಸಾರಥಿ ಆಸ್ಪತ್ರೆಯು ರೋಗಪರೀಕ್ಷೆ, ಚಿಕಿತ್ಸೆ ಮತ್ತು ಸಂಶೋಧನೆಗೆ ಸುಧಾರಿತ ಸೌಲಭ್ಯಗಳನ್ನು ಒಳಗೊಂಡಿದೆ. ಆಸ್ಪತ್ರೆಯ ಕ್ಲಿನಿಕಲ್ ಮತ್ತು ಸರ್ಜಿಕಲ್ ವಿಭಾಗಗಳಲ್ಲಿ ಆಂಕಾಲಜಿ, ಕಾರ್ಡಿಯಾಲಜಿ, ನ್ಯೂರಾಲಜಿ, ಎಂಡೋಕ್ರಿನಾಲಜಿ, ಗ್ಯಾಸ್ಟೋಎಂಟೆರಾಲಜಿ, ನೆಫ್ರಾಲಜಿ, ಯುರಾಲಜಿ, ಡರ್ಮಟಾಲಜಿ ಮತ್ತು ಪ್ಲಾಸ್ಟಿಕ್ ಸರ್ಜರಿ, ಅಂಗ ಬದಲಾವಣೆ, ರೊಬೊಟಿಕ್ ಸರ್ಜರಿ, ಅಪ್ಥಲ್ಮಾಜಿತಿ ಮತ್ತಿತರೆ ಸಮಗ್ರ ಮತ್ತು ಆರೋಗ್ಯಸೇವಾ ಪೂರೈಕೆಗೆ ಅವಕಾಶ ನೀಡಲಾಗುತ್ತದೆ.
ಇದರೊಂದಿಗೆ ನ್ಯಾಷನಲ್ ಮೆಡಿಕಲ್ ಕಮಿಷನ್ ನಿಯಮಗಳ ಅನ್ವಯ ಎಂಡಿ/ಎಂಎಸ್ ಮತ್ತು ಡಿಎಂ/ಎಂಸಿಎಚ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಅವರ ತರಗತಿ ಮತ್ತು ಪ್ರಯೋಗಾಲಯ ತರಬೇತಿಯೊಂದಿಗೆ ಆಸ್ಪತ್ರೆಯ ಸೂಕ್ತ ವಿಭಾಗಗಳ ತರಬೇತಿಯನ್ನು ನೀಡಲಾಗುತ್ತದೆ. ಈ ಆಸ್ಪತ್ರೆಯು ಸುಧಾರಿತ ಡಿಜಿಟಲ್ ತಂತ್ರಜ್ಞಾನಗಳು ಮತ್ತು ಪರಿಹಾರಗಳನ್ನು ಏಕೀಕೃತ ಎಲೆಕ್ಟ್ರಾನಿಕ್ ಮೆಡಿಕಲ್ ರೆಕಾರ್ಡ್ ಸಿಸ್ಟಮ್ಸ್‌ನಲ್ಲಿ ಅಳವಡಿಸುವ ವ್ಯವಸ್ಥೆ ಇರಲಿದೆ.
ಇದನ್ನೂ ಓದ: ಸಾವಿನಲ್ಲೂ ಸಾರ್ಥಕತೆ.. ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡ ನರ್ಸ್ ಗಾನವಿ ದೇಹದಾನ..