ಬೆಂಗಳೂರು: ಕೊರೊನಾ ಅಟ್ಟಹಾಸ ಎಲ್ಲರನ್ನೂ ನಡುಗಿಸುತ್ತಿದ್ದು, ಇಂದು ಒಂದೇ ದಿನ ರಾಜ್ಯದಲ್ಲಿ ದಾಖಲೆಯ ಮಟ್ಟದಲ್ಲಿ ಸಾವಿನ ಸಂಖ್ಯೆ ಏರಿಕೆ ಆಗಿದೆ.
ರಾಜ್ಯದಲ್ಲಿ ಇಂದು ಒಂದೇ ದಿನ 42 ಮಂದಿ ಸೋಂಕಿತರು ಬಲಿಯಾಗಿದ್ದು, ಒಟ್ಟಾರೆ 335 ಮಂದಿ ಕೊರೊನಾಗೆ ಹಾಗೂ 4 ಮಂದಿ ಅನ್ಯ ಕಾರಣಕ್ಕೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇಂದು 1,839 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 21,549ಕ್ಕೆ ಏರಿಕೆ ಆಗಿದೆ. ಇತ್ತ 9,244 ಮಂದಿಯನ್ನು ಡಿಸ್ಜಾರ್ಜ್ ಮಾಡಲಾಗಿದ್ದು, 11,966 ಸಕ್ರಿಯ ಪ್ರಕರಣಗಳಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. 226 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್-19 ಪಾಸಿಟಿವ್ ಆಗಿರುವ ರೋಗಿಗಳನ್ನು ಹೋಮ್ ಐಸೊಲೇಷನ್ ಮಾಡುವ ಕುರಿತು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಕೇವಲ ಎಸ್ಟಿಮೆಟಿಕ್ ಹಾಗೂ ಸೌಮ್ಯ ಗುಣಲಕ್ಷಣಗಳನ್ನು ಹೊಂದಿರುವವರಿಗೆ ಮಾತ್ರ ಹೋಮ್ ಐಸೊಲೇಷನ್ ಇರಲು ಅವಕಾಶ ಇರಲಿದೆ. ಅದು ಕೂಡ ಪ್ರತ್ಯೇಕ ಕೊಠಡಿಯಲ್ಲಿ ಇರಬೇಕಿದ್ದು, ಪ್ರೋಟೋಕಾಲ್ ಜಾರಿಯಲ್ಲಿ ಇರಲಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು, ಸಂಬಂಧಪಟ್ಟವರು ಹೋಮ್ ಐಸೋಲೆಷನ್ನಲ್ಲಿ ಇರುವ ವ್ಯಕ್ತಿಯ ತಪಾಸಣಾ ಕಾರ್ಯ ಮಾಡಬೇಕು. ಹೋಮ್ ಐಸೋಲೇಷನ್ ಡಿಸ್ಜಾರ್ಜ್ ಕೂಡ ಪ್ರೋಟೋಕಾಲ್ನಂತೆ ಇರಲಿದೆ.
ಇನ್ಮುಂದೆ ಕೊರೊನಾ ಲ್ಯಾಬ್ ರಿಪೋರ್ಟ್ ನೇರವಾಗಿ ರೋಗಿಗಳ ಕೈಗೆ
ಇನ್ಮುಂದೆ ನೇರವಾಗಿ ಲ್ಯಾಬ್ ರಿಪೋರ್ಟ್ ರೋಗಿಗಳ ಕೈ ಸೇರಲಿದೆ. ಖಾಸಗಿ ಲ್ಯಾಬ್ಗಳಿಂದಲೂ ನೇರವಾಗಿ ನಿಮಗೆ ರಿಪೋರ್ಟ್ ಸಿಗಲಿದೆ. ಸರ್ಕಾರದ ಮಾಹಿತಿಯು ಸಿಗಲಿದ್ದು, ಇದರಿಂದ ಪಾಸಿಟಿವ್ ರೋಗಿಗಳಿಗೆ ಕೂಡಲೇ ಚಿಕಿತ್ಸೆ ಸಿಗಲು ನೆರವಾಗುತ್ತದೆ. ಈ ಹಿಂದೆ ರೋಗಿಗಳಿಗೆ ರಿಪೋರ್ಟ್ ನೀಡದೆ ಆರೋಗ್ಯ ಅಧಿಕಾರಿಗಳು ಕರೆ ಮಾಡೋವರೆಗೂ ಕಾಯಬೇಕಿತ್ತು. ಕೆಲ ದಿನಗಳಾದರೂ ಪಾಸಿಟಿವ್ ಅಥವಾ ನೆಗೆಟಿವ್ ಇರೋದು ಗೊತ್ತಾಗುತ್ತಿರಲಿಲ್ಲ. ತುಂಬಾ ತಡವಾಗಿ ಪಾಸಿಟಿವ್ ಇರುವುದರ ಬಗ್ಗೆ ತಿಳಿಸಲಾಗುತ್ತಿತ್ತು. ಐಸಿಎಂಆರ್ ಪೋರ್ಟಲ್ನಲ್ಲಿ ಆರೋಗ್ಯ ಅಧಿಕಾರಿಗಳ ಮೂಲಕವೇ ರಿಪೋರ್ಟ್ ವರದಿ ಗೊತ್ತಾಬೇಕಿತ್ತು. ಹೀಗಾಗಿ ಇದರಿಂದ ಆಗುವ ತೊಂದರೆ ಬಗ್ಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ರಿಪೋರ್ಟ್ ರೋಗಿಗಳಿಗೆ ಕೂಡಲೇ ನೀಡುವ ನಿರ್ಧಾರಕ್ಕೆ ಆರೋಗ್ಯ ಇಲಾಖೆ ಬಂದಿದೆ.