ಬೆಂಗಳೂರು: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬಡವರ ಮನೆ ನಿರ್ಮಾಣದಲ್ಲಿ ವಿಳಂಬವಾಗಬಾರದೆಂಬ ಕಾರಣಕ್ಕೆ ಒಂದು ವಾರದಲ್ಲಿ ಫಲಾನುಭವಿಗಳಿಗೆ 400 ಕೋಟಿ ರೂ. ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಮಾರ್ಗಸೂಚಿಯಂತೆ 1.02 ಲಕ್ಷ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ ಎಂದು ಹೇಳಿದರು.
ಕರ್ನಾಟಕ ಗೃಹ ಮಂಡಳಿ ವತಿಯಿಂದ ಬೆಂಗಳೂರಿನಲ್ಲಿ ಒಂದು ಲಕ್ಷ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುವ ಯೋಜನೆಯಲ್ಲಿ 46 ಸಾವಿರ ಕಟ್ಟಡಗಳ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಆನ್ಲೈನ್ ಮೂಲಕ 43 ಸಾವಿರ ಅರ್ಜಿಗಳು ಬಂದಿವೆ ಎಂದರು.
ಇನ್ನು ಜಿಗಣಿ ಬಳಿ 30 ಸಾವಿರ ನಿವೇಶನಗಳನ್ನು ಒಳಗೊಂಡ ಪ್ರಧಾನಮಂತ್ರಿ ಟೌನ್ಶಿಪ್ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಒಂದು ಸಾವಿರ ಎಕರೆಯಲ್ಲಿ ಕೆಹೆಚ್ಬಿಯಿಂದ ಎರಡು ಹಂತದಲ್ಲಿ ಬಡಾವಣೆ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 83 ಸಾವಿರ ಮನೆಗಳ ನಿರ್ಮಾಣ ಕೆಲಸ ಆರಂಭ ಆಗಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಎಲ್ಲಾ ಕೆಲಸ ಕಾರ್ಯಗಳು ತ್ವರಿತವಾಗಿ ನಡೆಯುತ್ತಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಬಡವರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಇನ್ನು ಕೊಡಗಿನಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಮೈಸೂರಿನ ಜುಬಿಲಂಟ್ ಕಾರ್ಖಾನೆಯಲ್ಲಿ 1,500 ಮೇಲ್ಪಟ್ಟು ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಂತಾಗಿದೆ ಎಂದು ಹೇಳಿದರು.