ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಇಂದು ನಡೆದ ಕರ್ನಾಟಕ ಬಂದ್‌ನಿಂದಾಗಿ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕೆಗಳಿಂದ ಬರುವ 400 ಕೋಟಿಗಳಷ್ಟು ಹಣ ಸರ್ಕಾರಕ್ಕೆ ನಷ್ಟವಾಗಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಹೇಳಿದ್ದಾರೆ.
ಬಂದ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಇಂದು ನಡೆದ ಕರ್ನಾಟಕ ಬಂದ್ ಶಾಂತಿಯುತವಾಗಿದ್ದು, ಇದಕ್ಕೆ ಕರ್ನಾಟಕದಾದ್ಯಂತ ಇರುವ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ವಲಯದ ಸುಮಾರು 70 ರಷ್ಟು ಸಂಸ್ಥೆಗಳು ಬೆಂಬಲ ನೀಡಿದ್ದವು ಎಂದು ತಿಳಿಸಿದ್ದಾರೆ.
ಈ ಬಂದ್ಗೆ ಎಫ್‌ಕೆಸಿಸಿಐ ಕೂಡ ಸಂಪೂರ್ಣ ಬೆಂಬಲ ನೀಡಿತ್ತು. ಮತ್ತು ಈ ಬಂದ್‌ನಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸುಮಾರು 400 ಕೋಟಿ ರೂ. ಗಳಷ್ಟು ನಷ್ಟವಾಗಿದೆ. ಆದರೂ, ಕರ್ನಾಟಕ ರಾಜ್ಯದ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಮತ್ತು ನಾಡು, ನುಡಿ, ನೆಲ, ಜಲ, ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು ಎನ್ನುವ ದೃಷ್ಟಿಯಿಂದ ಇದು ಅನಿವಾರ್ಯವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾವೆಲ್ಲರೂ ನೀರನ್ನು ಸಂರಕ್ಷಿಸಿ ನ್ಯಾಯಯುತವಾಗಿ ಬಳಸಬೇಕಿದೆ ಮತ್ತು ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ಮಾತುಕತೆ ಮೂಲಕ ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ಎಫ್‌ಕೆಸಿಸಿಐ ಆಗ್ರಹಿಸುತ್ತದೆ ಎಂದು ರಮೇಶ್ ಚಂದ್ರ ಲಹೋಟಿ ಹೇಳಿದ್ದಾರೆ.
ಇಂದು ಕರ್ನಾಟಕ ಬಂದ್: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ, ರಾಜ್ಯದ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘ, ಹೋರಾಟ ಸಮಿತಿಗಳು ಇಂದು ರಾಜ್ಯಾದ್ಯಂತ ಕರ್ನಾಟಕ ಬಂದ್ಗೆ ಕರೆ ನೀಡಿದ್ದವು. ಕರ್ನಾಟಕ ಬಂದ್ಗೆ ರಾಜ್ಯದ ಕೆಲವೆಡೆ ಅದ್ಭುತ ಪ್ರತಿಕ್ರಿಯೆ ಕಂಡುಬಂದರೆ ಕೆಲವೆಡೆ ನೀರಸ ಪ್ರತಿಕ್ರಿಯೆ ಕಂಡು ಬಂದಿತ್ತು. ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಕರ್ನಾಟಕ ಬಂದ್ಗೆ ಬಹುತೇಕ ಬೆಂಬಲ ವ್ಯಕ್ತವಾಗಿತ್ತು. ಉಳಿದಂತೆ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಾವೇರಿ ನದಿಯ ಉಗಮ ಸ್ಥಾನ ಮಡಿಕೇರಿ, ಕೊಡಗು ಜಿಲ್ಲೆಯಲ್ಲಿಯೇ ಕಾವೇರಿ ನೀರಿಗಾಗಿ ನಡೆದ ಕರ್ನಾಟಕ ಬಂದ್ಗೆ ಬೆಂಬಲ ವ್ಯಕ್ತವಾಗಿರಲಿಲ್ಲ. ಇಂದಿನ ಬಂದ್ಗೆ ಚಿತ್ರರಂಗದಿಂದಲೂ ಬೆಂಬಲ ವ್ಯಕ್ತವಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ನೇತೃತ್ವದಲ್ಲಿ ನಗರದ ಗುರುರಾಜ ಕಲ್ಯಾಣ ಮಂಟಪದ ಬಳಿ ಕಲಾವಿದರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.
ಇದನ್ನೂ ಓದಿ: ಕರ್ನಾಟಕ ಬಂದ್ ಮಾಡಿದರೆ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಲ್ಲ: ಶಾಸಕ ಲಕ್ಷ್ಮಣ ಸವದಿ