ಬೆಂಗಳೂರು: ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ. ಪಾಟೀಲ್ ಅಧಿಕೃತವಾಗಿ ಇಂದು ಪದಗ್ರಹಣ ಮಾಡಿದರು. ನಗರದ ಅರಮನೆ ಮೈದಾನದಲ್ಲಿ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಳೆದ ತಿಂಗಳು ಇವರನ್ನು ಅಧ್ಯಕ್ಷರನ್ನಾಗಿ ಪಕ್ಷದ ಹೈಕಮಾಂಡ್ ಘೋಷಿಸಿತ್ತು. 2023 ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪ್ರಚಾರ ಜವಾಬ್ದಾರಿ ವಹಿಸಲಿದ್ದಾರೆ.
ಇಂದು ಅಧಿಕೃತವಾಗಿ ಪದಗ್ರಹಣ ಸಮಾರಂಭದಲ್ಲಿ, ರಾಜ್ಯ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಆರ್. ವಿ ದೇಶಪಾಂಡೆ, ವೀರಪ್ಪ ಮೊಯ್ಲಿ, ಹೆಚ್.ಕೆ. ಪಾಟೀಲ್, ರಾಮಲಿಂಗಾರೆಡ್ಡಿ, ಡಾ. ಜಿ. ಪರಮೇಶ್ವರ್, ಬಿ.ಕೆ. ಹರಿಪ್ರಸಾದ್, ರಮಾನಾಥ್ ರೈ, ಯು.ಟಿ. ಖಾದರ್, ಎಚ್.ಕೆ. ಪಾಟೀಲ್, ಕುಲದೀಪ್ ರಾಯ್ ಸೇರಿ ಹಲವರು ಭಾಗಿಯಾಗಿದ್ದರು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸಹ ಆಗಮಿಸಿದ್ದರು.
ಪರದಾಡಿದ ಮಾಜಿ ಸಚಿವ: ವೇದಿಕೆಗೆ ಬರಲು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ಪುತ್ರ ಪರದಾಡಿದ ದೃಶ್ಯ ಕಂಡು ಬಂತು. ವೇದಿಕೆ ಮೇಲೆ ಬರುತ್ತಿದ್ದ ಇಕ್ಬಾಲ್ ಅನ್ಸಾರಿ ಮತ್ತು ಅವರ ಮಗನನ್ನ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರು ತಡೆದು, ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ. ಅನ್ಸಾರಿ ಪುತ್ರನನ್ನ ಹಿಂದಕ್ಕೆ ಕಳುಹಿಸಿದ ಬಿ.ಎಲ್. ಶಂಕರ್, ನೀವು ಬನ್ನಿ ಮಗ ವೇದಿಕೆಗೆ ಬೇಡ ಎಂದರು. ಸ್ವಲ್ಪ ಹೊತ್ತು ಅವಮಾನ ಆದಂತೆ ವೇದಿಕೆಯ ಒಂದು ಭಾಗದಲ್ಲಿ ನಿಂತ ಇಕ್ಬಾಲ್ ಅನ್ಸಾರಿಯನ್ನು ಬಿ.ಎಲ್.ಶಂಕರ್ ಅವರು ಸಮಾಧಾನ ಪಡಿಸಿ, ವೇದಿಕೆ ಮೇಲಿನ ಒಂದು ಆಸನದಲ್ಲಿ ಕೂರಿಸಿದರು.
ರಾಜ್ಯದಲ್ಲಿ ಬಿಜೆಪಿಯ ಅತ್ಯಂತ ಭ್ರಷ್ಟ ಸರ್ಕಾರ ಇದೆ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, ಇಂದು ರಾಜ್ಯ ಕಾಂಗ್ರೆಸ್ ಒಂದು ನಿರ್ಣಾಯಕ ಹಂತದಲ್ಲಿ ಇದೆ. ರಾಜ್ಯದಲ್ಲಿ ಬಿಜೆಪಿಯ ಅತ್ಯಂತ ಭ್ರಷ್ಟ ಸರ್ಕಾರ ಇದೆ. ಬೊಮ್ಮಾಯಿ ನೇತೃತ್ವದ ಸರ್ಕಾರ 40 % ಸರ್ಕಾರವಾಗಿದೆ. ಜನರ ಮತದಿಂದ ಬಂದಿದ್ದಲ್ಲ. ಶಾಸಕರನ್ನು ಖರೀದಿಸಿ ರಚನೆಯಾದ ಸರ್ಕಾರವಾಗಿದೆ. ಒಂದು ದಿನವೂ ಈ ಸರ್ಕಾರಕ್ಕೆ ಮುಂದುವರಿಯುವ ಅರ್ಹತೆಯಿಲ್ಲ. ಸಚಿವರು, ಬಿಜೆಪಿ ಮುಖಂಡರು 40% ಕಮಿಷನ್ ಪಡೆದು ನಡೆಯುತ್ತಿದೆ ಎಂದು ಜನ ಮತ್ತು ಗುತ್ತಿಗೆದಾರರು ಹೇಳುತ್ತಿದ್ದಾರೆ. ತಮ್ಮ ಸ್ವಂತ ಜೇಬು ತುಂಬಿಕೊಳ್ಳಲು ಈ ಸರ್ಕಾರ ನಡೆಸುತ್ತಿದ್ದಾರೆ. ಜನರ ದುಡ್ಡನ್ನು ಕಬಳಿಸಿ ಸರ್ಕಾರ ನಡೆಯುತ್ತಿದೆ. ಇದು ಸರಿಯಲ್ಲ. ಸಿಬಿಐ, ಎಸಿಬಿ ಎಲ್ಲ ಏನಾಗಿದೆ. ಭ್ರಷ್ಟಾಚಾರ ನಡೆಯುವುದನ್ನು ನೋಡಿಯೂ ಸಿಎಂ, ಪಿಎಂ ಸುಮ್ಮನಿದ್ದಾರೆ. ಇಂದು ಕಾಂಗ್ರೆಸ್ನವರು ಒಂದು ಸಂಕಲ್ಪ ಮಾಡಿ ಇಲ್ಲಿಂದ ತೆರಳಬೇಕು. ಜನರ ಹಣ ತಿಂದು ಅಧಿಕಾರದಲ್ಲಿರುವವರಿಗೆ ಇರುವ ಅರ್ಹತೆ ಇಲ್ಲ ಎಂದು ಜನರೇ ಹೇಳುತ್ತಾರೆ. ರಾಜ್ಯದ ಸಚಿವರು ಕಮಿಷನ್ ಪಡೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನಿಯಮ ಉಲ್ಲಂಘಿಸಿ ಭೂಮಿ ಮಂಜೂರು ಆರೋಪ.. ಮಾಜಿ ಸಿಎಂ ಬಿಎಸ್ವೈ ವಿರುದ್ಧ ಎಸಿಬಿಗೆ ದೂರು
ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಬರುವ ಮಾಹಿತಿ ಇದೆ. ಅವರು ಈ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕೇಂದ್ರಕ್ಕೆ, ನಾಗಪುರಕ್ಕೆ ಸಹ ಕಮಿಷನ್ ಹಣ ಹೋಗುತ್ತದೆ ಎಂಬ ಅನುಮಾನ ಬರುತ್ತಿದೆ. ಎಂ.ಬಿ. ಪಾಟೀಲ್ಗೆ ಸಾಕಷ್ಟು ಜವಾಬ್ದಾರಿ ಇದೆ. ಇವರಿಗೆ ಬಲ ತುಂಬುವ ಕಾರ್ಯವನ್ನು ಉಳಿದ ರಾಜ್ಯ ನಾಯಕರು ಮಾಡಬೇಕು. ಮುಂದೆ ಮಹತ್ವದ ಜವಾಬ್ದಾರಿ ನಿಭಾಯಿಸುವ ದಿನ ಬರಲಿದೆ, ಅದಕ್ಕೆ ಸಜ್ಜಾಗಿ ಎಂದು ಸುರ್ಜೇವಾಲಾ ಕರೆ ಕೊಟ್ಟರು.
ಮೋದಿ ಲಕ್ಷಾಂತರ ಜನರನ್ನು ನಿರುದ್ಯೋಗಿಯಾಗಿಸಿದ್ದಾರೆ: ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. 19 ರಿಂದ 30 ರ ವಯೋಮಾನದವರಲ್ಲಿ ಶೇ.26 ರಷ್ಟು ಮಂದಿ ನಿರುದ್ಯೋಗಿಗಳಿದ್ದಾರೆ. ಗ್ರಾಮೀಣ ಭಾಗದಲ್ಲಿ ಒಂಬತ್ತು, ನಗರದಲ್ಲಿ ಏಳೂವರೆ ಪರ್ಸೆಂಟ್ ನಿರುದ್ಯೋಗ ಸಮಸ್ಯೆ ಇದೆ. ಅಧಿಕಾರಕ್ಕೆ ಬರುವ ಮುನ್ನ ಮೋದಿ ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದಿದ್ದರು. ಆದರೆ ಲಕ್ಷಾಂತರ ಮಂದಿಯನ್ನು ನಿರುದ್ಯೋಗಿಯಾಗಿಸಿದ್ದಾರೆ. ಹಿಂದುಳಿದ ವರ್ಗದವರಿಗೆ ಸಿಗಬೇಕಾದ ಉದ್ಯೋಗ ಸಿಗುತ್ತಿಲ್ಲ. ಹೊಸದು ಇರಲಿ, ಇರುವ ಉದ್ಯೋಗ ತುಂಬುತ್ತಿಲ್ಲ. ದೇಶದಲ್ಲಿ ಒಟ್ಟಾರೆ 10 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದೆ. ವಿವಿಯಿಂದ ಸೇನೆಯವರೆಗೆ ಹಲವೆಡೆ ಉದ್ಯೋಗ ಖಾಲಿ ಇವೆ. ಯುವಕರಿಗೆ ಅನ್ಯಾಯ ಆಗುತ್ತಿದೆ. ನಾವು ಸಂಪಾದಿಸಿದ ಆಸ್ತಿಯನ್ನು ಮೋದಿ ಮತ್ತು ಶಾ ಸರ್ಕಾರ ಮಾರುತ್ತಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.