ಬೆಂಗಳೂರು: ಸಂವಿಧಾನ ವಿರೋಧಿ ಶಕ್ತಿಗಳು ಭಾರತವನ್ನು ಶಿಲಾಯುಗಕ್ಕೆ ಮರಳಿ ಒಯ್ಯಲು ಯತ್ನಿಸುತ್ತಿದ್ದು, ಎಲ್ಲ ನಾಗರಿಕರು ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ನಗರ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ 36ನೇ ಲಾ ಏಷಿಯಾ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕೆಲವು ಸಂವಿಧಾನ ವಿರೋಧಿ ಶಕ್ತಿಗಳು ಸಂವಿಧಾನವನ್ನು ಅಲ್ಲಗಳೆದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ನಾವೆಲ್ಲರೂ ಸಂವಿಧಾನದ ರಕ್ಷಣೆಗೆ ಬದ್ಧರಾಗಿದ್ದೇವೆ. ಸಂವಿಧಾನವನ್ನು ರಕ್ಷಣೆ ಮಾಡುವುದು ಭಾರತದ ಪ್ರತಿ ಪ್ರಜೆಯ ಕರ್ತವ್ಯ ಎಂದು ಹೇಳಿದರು.
ಯುವಜನತೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯವನ್ನು ಅರ್ಥಮಾಡಿಕೊಳ್ಳಬೇಕು. ಆ ಮೂಲಕ ಸಂವಿಧಾನದ ಪೀಠಿಕೆ, ಘನತೆಯುತ ಬದುಕು, ಸ್ವಾತಂತ್ರ್ಯ ಮತ್ತು ಸಮಾನತೆ ಅದರ ಮುಖ್ಯ ಉದ್ದೇಶ ಎಂಬುದನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು. ವಿಶ್ವದ ಹಲವು ದೇಶಗಳಿಂದ ಹಲವಾರು ಅಂಶಗಳನ್ನು ಪಡೆದು ನಮ್ಮ ಸಂವಿಧಾನವನ್ನು ರಚನೆ ಮಾಡಿದ್ದು, ಅತ್ಯಂತ ವೈಶಿಷ್ಟ್ಯದಿಂದ ಕೂಡಿದೆ. ಹಲವಾರು ತಿದ್ದುಪಡಿಗಳಿಂದ ಮೂಲ ಸಂವಿಧಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಭಾರತದ ಸಂವಿಧಾನವು ಸಂಕುಚಿತವಾಗಿಲ್ಲ. ಕೆಲವು ನಿಯಮಗಳನ್ನು ಪಾಲಿಸುವ ಮೂಲಕ ಸಂಸತ್ತು ಸಂವಿಧಾನದಲ್ಲಿ ತಿದ್ದುಪಡಿಗಳನ್ನು ತರಬಹುದು ಎಂದರು.
ಭಾರತವು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಪ್ರಭುತ್ವ ಮತ್ತು ಗಣತಂತ್ರ ಎಂದು ಸಂವಿಧಾನ ತಿಳಿಸುತ್ತದೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ಸಂವಿಧಾನದ ಉದ್ದೇಶಗಳು. ನಮ್ಮ ಸರ್ಕಾರ ಸಂವಿಧಾನವನ್ನು ಅಕ್ಷರಶಃ ಪಾಲಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ ಎಂದು ಸಿಎಂ ತಿಳಿಸಿದರು.
ಕಳೆದ 50 ವರ್ಷಗಳಲ್ಲಿ ಲಾ ಏಷಿಯಾ ಸಂಸ್ಥೆಯು ಅಂತರರಾಷ್ಟ್ರೀಯ ಕಾನೂನು ಜ್ಞಾನವನ್ನು ಪ್ರಚುರಪಡಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುವುದಲ್ಲದೇ, ಕಾನೂನು ವೃತ್ತಿಯ ಧ್ವನಿಯಾಗಿಯೂ ಕಾರ್ಯನಿರ್ವಹಿಸುತ್ತಿದೆ. ಕಾನೂನು ವೃತ್ತಿಪರರು ಹಾಗೂ ವಕೀಲ ಸಂಘಗಳ ಪ್ರತಿನಿಧಿಗಳಾಗಿ, ಅಂತಾರಾಷ್ಟ್ರೀಯ ಕಾನೂನು ವ್ಯವಸ್ಥೆಯ ಬಗ್ಗೆ ನಿಮಗಿರುವ ಅನನ್ಯ ಜ್ಞಾನವನ್ನು ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಾಗರಿಕ ಸಮಾಜದಲ್ಲಿ ಜೀವನ ನಡೆಸಲು ಕೆಲವೊಂದು ನಿಯಮಾವಳಿಗಳನ್ನು ಪಾಲಿಸುವುದು ಅತ್ಯಗತ್ಯವಾಗಿದ್ದು, ಸಮುದಾಯದ ಎಲ್ಲರೂ ಪಾಲಿಸಬೇಕಾದ ನಿಯಮಗಳನ್ನು ಕಾನೂನು ರೂಪಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಸ್ವಾಮಿನಾಥನ್ ಸಂಶೋಧನಾ ಸಂಸ್ಥೆಯ ಅಧ್ಯಕ್ಷೆ ಡಾ.ಸೌಮ್ಯ ಸ್ವಾಮಿನಾಥನ್, ವಿಶ್ವಮಟ್ಟದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಕಾನೂನು ತಜ್ಞರು ಶ್ರಮಿಸಬೇಕು ಎಂದು ತಿಳಿಸಿದರು. ಆಸ್ಟ್ರೇಲಿಯಾದ ಮುಖ್ಯ ನ್ಯಾಯಮೂರ್ತಿ ಜ.ಬ್ರೈನ್ ಜೆ. ಪ್ರಿಸ್ಟನ್, ಜಪಾನ್ ನ ಕಾನೂನು ಪ್ರಾಧ್ಯಾಪಕರಾದ ಪ್ರೊ.ಯಸುಶಿ ಹೈಗಶಿಝಾವ, ಏ ಏಷ್ಯಾದ ಅಧ್ಯಕ್ಷ ಮಿಲೆಸ್ಸಾ ಕೆ ಪಂಗ್, ಬಾರ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷರಾದ ಪ್ರಶಾಂತ್ ಕುಮಾರ್, ಉಪಾಧ್ಯಕ್ಷ ಎಸ್.ಎಸ್.ನಾಗಾನಂದ್ ಸೇರಿದಂತೆ ಹಲವಾರು ಹಿರಿಯ ವಕೀಲರು ಇದ್ದರು.
ಇದನ್ನೂಓದಿ:ಡಿಕೆಶಿ ವಿರುದ್ಧದ ಸಿಬಿಐ ಕೇಸ್ ವಾಪಸ್ ಪಡೆದಿದ್ದು ನ್ಯಾಯಾಲಯಕ್ಕೆ ಸವಾಲು ಹಾಕುವಂತಿದೆ: ನಾರಾಯಣಸ್ವಾಮಿ