ಬೆಂಗಳೂರು: ಜಿಂದಾಲ್ ಸಂಸ್ಥೆಗೆ 3,667 ಎಕರೆ ಸರ್ಕಾರಿ ಭೂಮಿ ಪರಭಾರೆ ಮಾಡುವ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರಲಿದೆ ಎಂದು ಹೈಕೋರ್ಟ್ ತಿಳಿಸಿದೆ. ಸರ್ಕಾರಿ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಖಾಸಗಿ ಸಂಸ್ಥೆಗೆ ನೀಡಲು ಮುಂದಾಗಿರುವ ಸರ್ಕಾರದ ಕ್ರಮ ನಿಯಮಬಾಹಿರ ಎಂದು ಆಕ್ಷೇಪಿಸಿ ಬೆಂಗಳೂರಿನ ಕೆ.ಎ ಪಾಲ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಜಿಂದಾಲ್ ಕಂಪನಿಗೆ ಸರ್ಕಾರಿ ಜಮೀನು ಮಂಜೂರು ಮಾಡುವ ಸಂಬಂಧ ಸಚಿವ ಸಂಪುಟ ನಿರ್ಧಾರ ಕೈಗೊಂಡಿದ್ದು ನಿಜ. ಆದರೆ, ಸಂಪುಟದ ತೀರ್ಮಾನ ಅಂತಿಮಗೊಂಡಿಲ್ಲ ಮತ್ತು ಸದ್ಯಕ್ಕೆ ಆ ನಿರ್ಧಾರವನ್ನು ಜಾರಿಗೊಳಿಸದಿರಲು ಸರ್ಕಾರ ತೀರ್ಮಾನಿಸಿದೆ ಎಂದು ವಿವಿರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸರ್ಕಾರಿ ಜಮೀನು ಪರಭಾರೆ ವಿಚಾರವಾಗಿ ಸರ್ಕಾರ ಕೈಗೊಂಡಿರುವ ನಿರ್ಧಾರ ಸ್ಪಷ್ಟವಾಗಿಲ್ಲ. ಹೀಗಾಗಿ, ಜಿಂದಾಲ್ ಕಂಪನಿಗೆ ಜಮೀನು ಪರಭಾರೆ ಮಾಡುವ ಸಂಬಂಧ ಸರ್ಕಾರ ಕೈಗೊಳ್ಳುವ ಯಾವುದೇ ಕ್ರಮ ಈ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ತಿಳಿಸಿ, ವಿಚಾರಣೆಯನ್ನು ಜುಲೈ 13ಕ್ಕೆ ಮುಂದೂಡಿತು. ಇದೇ ವೇಳೆ ಜಿಂದಾಲ್ ಕಂಪನಿ ಪರ ವಕೀಲ ಅಭಿಷೇಕ್ ಸಿಂಘ್ವಿ ಪೀಠಕ್ಕೆ ಮನವಿ ಮಾಡಿ, ಪ್ರಕರಣದಲ್ಲಿ ಕಾನೂನು ಹೋರಾಟದ ಹಕ್ಕನ್ನು ಕಾಯ್ದಿರಿಸಬೇಕು ಎಂದು ಮನವಿ ಮಾಡಿದರು.
ಅರ್ಜಿದಾರರ ಆರೋಪ :
ವಿಜಯನಗರ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ 3,667 ಎಕರೆ ಭೂಮಿಯನ್ನು ಸರ್ಕಾರ ಜಿಂದಾಲ್ ಸಂಸ್ಥೆಗೆ ಪರಭಾರೆ ಮಾಡಿದೆ. 2019 ರಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಜಮೀನು ಪರಭಾರೆ ಮಾಡಲು ಮುಂದಾಗಿದ್ದಾಗ ಪ್ರತಿಪಕ್ಷದಲ್ಲಿದ್ದ ಯಡಿಯೂರಪ್ಪ ಈ ಕ್ರಮವನ್ನು ವಿರೋಧಿಸಿದ್ದರು. ಇದೀಗ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರವೇ ಸಂಸ್ಥೆಗೆ ಜಮೀನು ನೀಡಲು ಮುಂದಾಗಿದೆ.
ಜಮೀನು ಪರಬಾರೆ ಸಂಬಂಧ ತರಾತುರಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ. ಜತೆಗೆ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಹೀಗಾಗಿ, 2021ರ ಏಪ್ರಿಲ್ 26ರಂದು ಜಮೀನು ಪರಭಾರೆ ಸಂಬಂಧ ಸಚಿವ ಸಂಪುಟ ಕೈಗೊಂಡ ನಿರ್ಧಾರ ರದ್ದುಪಡಿಸಬೇಕು. ಪ್ರಕರಣದ ತನಿಖೆ ನಡೆಸಲು ಸ್ವತಂತ್ರ ಸಂಸ್ಥೆ ನೇಮಿಸಿ, ತನಿಖೆಯನ್ನು ಹೈಕೋರ್ಟ್ ಮೇಲ್ವಿಚಾರಣೆ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.