ಬೆಂಗಳೂರು: ಇಂದು ರಾಜ್ಯದಲ್ಲಿ 36 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ1,092 ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾಗೆ 36 ಮಂದಿ ಬಲಿಯಾಗಿದ್ದು, ಒಟ್ಟಾರೆ ರಾಜ್ಯದಲ್ಲಿ 496 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 559 ಮಂದಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 13 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿ 106 ಜನರನ್ನ ತಪಾಸಣೆ ಮಾಡಲಾಗಿದ್ದು, 6,300 ಸ್ಯಾಂಪಲ್ಸ್ ಅನ್ನು ಪರೀಕ್ಷಿಸಲಾಗಿದೆ. ವಿದೇಶದಿಂದ ಬಂದಿರುವ ಪ್ರಯಾಣಿಕರು ಮೊದಲ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ ನಂತರ ಅವರ ಜಿಲ್ಲೆಗೆ ಹೋದ ಮೇಲೆ ನೆಗೆಟಿವ್ ಇದ್ದರೂ 14 ದಿನ ಹೋಂ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಇತರೆ ಆರೋಗ್ಯ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರನ್ನು ನಿರ್ವಹಣೆ ಮಾಡುವ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ.
ವಲಸೆ ಕಾರ್ಮಿಕರು ರಸ್ತೆ ಅಥವಾ ರೈಲ್ವೆ ಹಳಿಗಳ ಮೂಲಕ ಸಾಗದೆ ವಿಶೇಷವಾಗಿ ನಿಯೋಜಿಸಿರುವ ಬಸ್ ಮತ್ತು ಶ್ರಮಿಕ್ ರೈಲುಗಳ ಮೂಲಕ ಪ್ರಯಾಣ ಮಾಡುವಂತೆ ಸೂಚಿಸಲಾಗಿದೆ. ಗಡಿಭಾಗದ ಜಿಲ್ಲೆಗಳಲ್ಲಿ ಕೋವಿಡ್-19 ನಿಯಂತ್ರಣ ಚಟುವಟಿಕೆಗಳನ್ನು ಸುಗಮವಾಗಿ ನಿರ್ವಹಿಸಲು ಅವಶ್ಯವಿರುವ ಲಾಜಿಸ್ಟಿಕ್ಸ್ ಹಾಗೂ ಮಾನವ ಸಂಪನ್ಮೂಲದ ನಿರ್ವಹಣೆಯ ಜವಾಬ್ದಾರಿಯನ್ನು ಸಂಬಂಧಿತ ಪ್ರಾದೇಶಿಕ ಆಯುಕ್ತರಿಗೆ ವಹಿಸಲಾಗಿದೆ.
ಕ್ವಾರಂಟೈನ್ನಲ್ಲಿ ಇರುವವರಿಗೆ ಸರಿಯಾದ ಆಹಾರ ಪೂರೈಸದ ಆರೋಪ
ಇತ್ತ, ವಿದೇಶಗಳಿಂದ ಹಾಗೂ ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಕ್ವಾರಂಟೈನ್ನಲ್ಲಿರಬೇಕು. ಈ ವೇಳೆ ಸರ್ಕಾರಿ ಕ್ವಾರಂಟೈನ್ ಅಥವಾ ಇಷ್ಟದ ಖಾಸಗಿ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಆಗಬಹುದು. ಆದರೆ ಇಂತಹ ಖಾಸಗಿ ಹೋಟೆಲ್ಗಳಲ್ಲಿ ಕ್ವಾರಂಟೈನ್ ಆದವರಿಗೆ ಸರಿಯಾದ ತಿಂಡಿ ಊಟದ ವ್ಯವಸ್ಥೆ ಇಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಸ್ವಚ್ಛತೆ ಹಾಗೂ ಆಹಾರ ಪೂರೈಕೆ ಬಗ್ಗೆ ದೂರುಗಳು ಬಂದಿವೆ. ಕ್ವಾರಂಟೈನ್ ಬಂದವರನ್ನು ಅತಿಥಿಗಳ ರೀತಿಯಲ್ಲಿ ನೋಡಿಕೊಳ್ಳಬೇಕು. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರುಗಳ ಸಂಬಂಧ ಪರಿಶೀಲಿಸುವಂತೆ ಸೂಚಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚಿಸಿ ಈ ರೀತಿ ಕೆಲಸದಲ್ಲಿ ತೊಡಗಿರುವ ಹೋಟೆಲ್ಗಳ ಲೈಸೆನ್ಸ್ ರದ್ದು ಮಾಡುವ ಅವಕಾಶ ಇರಲಿದೆ. ಈ ಬಗ್ಗೆ ಮಾತಾನಾಡಲಾಗುವುದು ಅಂತ ತಿಳಿಸಿದ್ದಾರೆ.