ಬೆಂಗಳೂರು: ರಾಜ್ಯದಲ್ಲಿ ಇಂದು 8 ಮಂದಿ ಕೊರೊನಾ ವೈರಸ್ಗೆ ಬಲಿಯಾಗಿದ್ದು, ಈವರೆಗೆ 150 ಸೋಂಕಿತರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲೇ ಅತೀ ಹೆಚ್ಚು ಜನರು ಬಲಿಯಾಗಿರುವುದು ಆತಂಕ ಮೂಡಿಸಿದೆ. ಇಂದು ಒಂದೇ ದಿನ 322 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 9721ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದುವರೆಗೆ 6,004 ಮಂದಿ ಗುಣಮುಖರಾಗಿದ್ದು, ಒಟ್ಟು 3,563 ಸಕ್ರಿಯ ಪ್ರಕರಣಗಳಿವೆ.
ಇನ್ನು ಮತ್ತೊಂದು ಆತಂಕದ ವಿಚಾರವೆಂದರೆ ಐಸಿಯುನಲ್ಲಿ 120 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲೂ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಇನ್ನು ಈವರೆಗೆ ರಾಜ್ಯದಲ್ಲಿ 5,26,538 ಮಂದಿಯ ಕೊರೊನಾ ಪರೀಕ್ಷೆ ಮಾಡಿದ್ದು, 5,03,734 ಮಂದಿಯ ವರದಿ ನೆಗೆಟಿವ್ ಬಂದಿದೆ. ಸುಮಾರು 37,338 ಮಂದಿ ಸೋಂಕಿತರ ಸಂಪರ್ಕ ಹೊಂದಿದ್ದಾರೆ.
ಕೊರೊನಾ ವಿರುದ್ಧ ಸೆಣಸಲು ಮೆಡಿಕಲ್ ಕಾಲೇಜುಗಳಿಗೆ ಕರೆ
ಉದ್ಯಾನ ನಗರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದ್ದು, ಕೋವಿಡ್ - 19 ವಿರುದ್ಧ ಸೆಣಸಲು ಮೆಡಿಕಲ್ ಕಾಲೇಜುಗಳು ಸಿದ್ಧರಾಗಿ ಎಂದು ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಸೂಚನೆ ನೀಡಿದ್ದಾರೆ. ಬೆಂಗಳೂರಿನ 12 ಮೆಡಿಕಲ್ ಕಾಲೇಜುಗಳು ಹಾಸಿಗೆಗಳು ಹಾಗೂ ವೆಂಟಿಲೇಟರ್ ಮೀಸಲಿಡಬೇಕು. ಪ್ರತಿ ಮೆಡಿಕಲ್ ಕಾಲೇಜಿನಿಂದ 200 ಬೆಡ್, 20 ವೆಂಟಿಲೇಟರ್ ಮೀಸಲಿಡಲು ಸೂಚನೆ ನೀಡಲಾಗಿದೆ.
ರಾಮಯ್ಯ ಮೆಡಿಕಲ್ ಕಾಲೇಜು, ಸಪ್ತಗಿರಿ ಮೆಡಿಕಲ್ ಕಾಲೇಜು, ವೈದೇಹಿ, ರಾಜರಾಜೇಶ್ವರಿ, ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು ಸೇರಿದಂತೆ 12 ಕಾಲೇಜಿಗೆ ಸೂಚನೆ ನೀಡಿದ್ದು, ಎಲ್ಲಾ ರೀತಿಯಲ್ಲೂ ಸಹಕರಿಸುವಂತೆ ತಿಳಿಸಿದ್ದಾರೆ.
ಜಯದೇವ ಆಸ್ಪತ್ರೆಯಲ್ಲಿ 4 ದಿನಗಳ ಕಾಲ ಒಪಿಡಿ ಸೇವೆ ಬಂದ್
ಜಯದೇವ ಆಸ್ಪತ್ರೆ ವೈದ್ಯರನ್ನು ಕೊರೊನಾ ವೈರಸ್ ಕೆಂಗೆಡಿಸಿದ್ದು, ಸದ್ಯ ನಾಳೆಯಿಂದ ಒಟ್ಟು ನಾಲ್ಕು ದಿನ ಕಾಲ ಒಪಿಡಿ ಸೇವೆ ಇರೋದಿಲ್ಲ. ಆಸ್ಪತ್ರೆಯಲ್ಲಿ ನಾಲ್ವರಿಗೆ ಪಾಸಿಟಿವ್ ಬಂದ ಹಿನ್ನೆಲೆ, ಜೂನ್ 24 ರಿಂದ 27 ರವರೆಗೆ ಹೊರ ರೋಗಿಗಳ ಚಿಕಿತ್ಸೆ ಇರೋದಿಲ್ಲ.
ತುರ್ತು ಚಿಕಿತ್ಸೆಯ ಅವಶ್ಯಕತೆ ಇದ್ದರೆ ಮಾತ್ರ ಆಸ್ಪತ್ರೆಗೆ ಬರುವಂತೆ ರೋಗಿಗಳಿಗೆ ಮನವಿ ಮಾಡಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲೂ ಒಪಿಡಿ ಬಂದ್ ಮಾಡಿರಲಿಲ್ಲ, ಇದೀಗ ವೈದ್ಯರು ಹಾಗೂ ಸಿಬ್ಬಂದಿಗೆ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಒಪಿಡಿ ಕ್ಲೋಸ್ ಮಾಡಲಾಗಿದೆ.