ಬೆಂಗಳೂರು: ಕೇವಲ 300 ರೂ. ಬಡ್ಡಿ ಹಣ ಕೊಡಲಿಲ್ಲ ಎಂದು ಸ್ನೇಹಿತನ ಕತ್ತುಕೊಯ್ದು ಕೊಲೆ ಮಾಡಿದ ಆರೋಪಿಯನ್ನ ಹಲಸೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಣಿ ಬಂಧಿತ ಆರೋಪಿ. ಮಣಿ ಹಾಗೂ ವಿನ್ಸೆಂಟ್ ಪರಸ್ಪರ ಪರಿಚಿತರಾಗಿದ್ದು, ಕಷ್ಟಕಾಲದಲ್ಲಿ ಮಣಿಯಿಂದ ವಿನ್ಸೆಂಟ್ 50 ಸಾವಿರ ರೂಪಾಯಿ ಪಡೆದಿದ್ದ. ವಿನ್ಸೆಂಟ್ ವಾರಕ್ಕೆ 300 ರೂ. ಬಡ್ಡಿ ನೀಡಬೇಕಿತ್ತು. ಆದರೆ ವಿನ್ಸೆಂಟ್ ಬಡ್ಡಿ ಹಣ ನೀಡದೇ ಇದ್ದಿದ್ದರಿಂದ ಆಗಸ್ಟ್ 2ರಂದು ದೊಮ್ಮಲೂರಿನ ಕೆನರಾ ಬ್ಯಾಂಕ್ ಬಳಿ ಇಬ್ಬರೂ ಕಿತ್ತಾಡಿಕೊಂಡಿದ್ದರು. ಈ ವೇಳೆ, ವಿನ್ಸೆಂಟ್ ಮಣಿ ಮೇಲೆ ಹಲ್ಲೆ ಸಹ ಮಾಡಿದ್ದ. ಬಳಿಕ ಸಿಟ್ಟಿಗೆದ್ದ ಮಣಿ ಬೈಕ್ ಹತ್ತಿ ಹೊರಡುತ್ತಿದ್ದ ವಿನ್ಸೆಂಟ್ನ ಕತ್ತು ಕೊಯ್ದಿದ್ದ. ಬಳಿಕ ವಿನ್ಸೆಂಟ್ನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ.
ಪ್ರಕರಣ ದಾಖಲಿಸಿಕೊಂಡಿದ್ದ ಹಲಸೂರು ಠಾಣಾ ಪೊಲೀಸರು, ರಾಮಮೂರ್ತಿ ನಗರದ ಪರಿಚಿತರ ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನ ಬಂಧಿಸಿದ್ದಾರೆ.