ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಭೀತಿಯಿಂದಾಗಿ ಈಗಾಗಲೇ ಶಾಲಾ-ಕಾಲೇಜುಗಳು ಬಾಗಿಲು ಮುಚ್ಚಿವೆ. ಮುನ್ನೆಚ್ಚರಿಕೆ ವಹಿಸಿ ಪರೀಕ್ಷೆಗಳು ಮುಗಿದಿವೆಯಾದರೂ, ಶಾಲಾ-ಕಾಲೇಜು ಆರಂಭದ ಬಗ್ಗೆ ಇನ್ನು ಸ್ಪಷ್ಟವಾಗಿ ಶಿಕ್ಷಣ ಇಲಾಖೆ ಹೇಳಿಲ್ಲ. ಹೀಗಾಗಿ, ತರಗತಿ ಆರಂಭದವರೆಗೆ ಆನ್ಲೈನ್ ತರಗತಿಗಳನ್ನು ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವುದರಿಂದ, ಶೈಕ್ಷಣಿಕ ವರ್ಷದಲ್ಲಿ ಶೇ. 30 ರಷ್ಟು ಪಠ್ಯ ಕಡಿತ ಮಾಡಲಾಗುತ್ತಿದೆ.
ಕೊರೊನಾದಿಂದ ಶೈಕ್ಷಣಿಕ ವರ್ಷ ಆರಂಭ ವಿಳಂಬ ಸಾಧ್ಯತೆ ಹಿನ್ನೆಲೆ, ವರ್ಷದ ಪೂರ್ಣ ಪ್ರಮಾಣದ ಪಠ್ಯ ಬೋಧನೆ ಅಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶೇ. 30 ರಷ್ಟು ಪಠ್ಯ ಕಡಿತವಾಗಲಿದೆ. 1 ರಿಂದ 10ನೇ ತರಗತಿ ಮಕ್ಕಳಿಗೆ ಪಠ್ಯ ಕಡಿತವಾಗಲಿದ್ದು, ಅಗತ್ಯ ಪಠ್ಯಗಳನ್ನು ಮಾತ್ರ ಉಳಿಸಿಕೊಳ್ಳಲಾಗುವುದು.
ಪಠ್ಯದಲ್ಲಿ ಯಾವುದನ್ನ ಉಳಿಸಿಕೊಳ್ಳಬೇಕೆಂಬ ಚಿಂತನೆಗೆ ತಜ್ಞರ ಸಮಿತಿ ರಚನೆ ಮಾಡಲಾಗಿತ್ತು. ತಜ್ಞರು ನೀಡುವ ಸಲಹೆ ಮೇರೆಗೆ ಯಾವ ವಿಷಯ ಉಳಿಸಿಕೊಳ್ಳಬೇಕೆಂದು ತೀರ್ಮಾನ ಮಾಡಲಾಗಿದೆ. ಸೋಮವಾರ ಪಠ್ಯಕ್ರಮವನ್ನು ಕರ್ನಾಟಕ ಟೆಕ್ಸ್ಟ್ ಬುಕ್ ಸೊಸೈಟಿಯು ತನ್ನ ವೆಬ್ಸೈಟ್ಗೆ ಅಪಲೋಡ್ ಮಾಡಲಿದೆ. ಈ ಬಗ್ಗೆ ಸೊಸೈಟಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.