ಬೆಂಗಳೂರು: ಕೋವಿಡ್ ಹಿನ್ನೆಲೆ ಎಲ್ಲೆಡೆ ಲಾಕ್ಡೌನ್ ಜಾರಿಯಿದ್ದ ಕಾರಣ 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ನಿಗದಿತ ಸಮಯದಲ್ಲಿ ಪ್ರಾರಂಭವಾಗಿಲ್ಲ. ಹೀಗಾಗಿ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ಶೇ. 30ರಷ್ಟು ಕಡಿತ ಮಾಡಿ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಅಲ್ಲದೆ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ಪುನರಾವರ್ತಿತ ಹಾಗೂ ಖಾಸಗಿಯಾಗಿ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳಿಗೂ ಸಹ ಇದು ಅನ್ವಯಿಸುತ್ತದೆ ಎಂದು ಇಲಾಖಾ ನಿರ್ದೇಶಕರು ತಿಳಿಸಿದ್ದಾರೆ.
ವಿಶೇಷ ಸೂಚನೆಯಾಗಿ ಈ ಪಠ್ಯವಸ್ತು ಕಡಿತ 2020-21ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯಿಸುತ್ತದೆ. 2021-22ರ ಶೈಕ್ಷಣಿಕ ವರ್ಷದಿಂದ ಪಠ್ಯದಲ್ಲಿ ಯಾವುದೇ ಕಡಿತ ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.