ಬೆಂಗಳೂರು: ಕೋವಿಡ್ ಎರಡನೇ ಅಲೆಯಿಂದ ರಾಜ್ಯದಲ್ಲಿ ಮೂವತ್ತು ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಎಫ್ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ.ಸುಂದರ್ ಹೇಳಿದ್ದಾರೆ. ಕೊರೊನಾದಿಂದ ಕೈಗಾರಿಕರಗಳು, ಸಣ್ಣಪುಟ್ಟ ವ್ಯಾಪಾರಸ್ಥರು,ಮಾಲ್ಗಳು, ಬೀದಿ ಬದಿ ವ್ಯಾಪಾರಿಗಳಿಗೂ ಸಾಕಷ್ಟು ತೊಂದರೆಯಾಗಿದೆ ಎಂದಿದ್ದಾರೆ.
ನಗರದಲ್ಲಿ ಮಾತನಾಡಿದ ಎಫ್ಕೆಸಿಸಿಸಿಐ ಅಧ್ಯಕ್ಷ ಪೆರಿಕಲ್ ಎಂ ಸುಂದರ್, ಜಿಎಸ್ಟಿ ರೂಪದಲ್ಲಿ ಸುಮಾರು 84 ಸಾವಿರ ಕೋಟಿ, ರಾಜ್ಯ ಅಬಕಾರಿ ತೆರಿಗೆಯಿಂದ 24 ಸಾವಿರ ಕೋಟಿ, ಪೆಟ್ರೋಲ್ ಮತ್ತು ಡೀಸೆಲ್ನಿಂದ 16 ಸಾವಿರ ಕೋಟಿ, ಆದಾಯ ತೆರಿಗೆಯಿಂದ 1.20 ಲಕ್ಷ ಕೋಟಿ ಸೇರಿ 2.44 ಲಕ್ಷ ಕೋಟಿ ರೂಪಾಯಿ ಆದಾಯವನ್ನು ಸರ್ಕಾರಗಳು ಪಡೆದಿವೆ.
ಲಾಕ್ಡೌನ್ ಅವಧಿಯಲ್ಲಿ ವ್ಯಾಪಾರ ಮತ್ತು ಕೈಗಾರಿಕೆಗಳು ಪ್ರಸ್ತುತ ಎದುರಿಸುತ್ತಿರುವ ಕಷ್ಟವನ್ನು ಗಮನದಲ್ಲಿಟ್ಟುಕೊಂಡು, ವ್ಯಾಪಾರ ಮತ್ತು ಕೈಗಾರಿಕೆಗಳಿಂದ ಗಳಿಸಲ್ಪಟ್ಟ ಆದಾಯದ ಕನಿಷ್ಠ ಶೇ.10 ನಷ್ಟು ಹಣವನ್ನು ಅಂದರೆ 20 ಸಾವಿರ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಬೇಕು. ಎಂದು ಮನವಿ ಮಾಡಿದ್ದಾರೆ.
ಲಾಕ್ಡೌನ್ ನಿಯಮಾವಳಿ ಪಾಲಿಸಿರುವುದರಿಂದ ವ್ಯಾಪಾರೋದ್ಯಮಕ್ಕೆ ಸುಮಾರು 75 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಸರ್ಕಾರ ಕಷ್ಟದಲ್ಲಿರುವ ಉದ್ಯಮ ಹಾಗೂ ವ್ಯಾಪಾರಿಗಳಿಗೆ ಸೂಕ್ತ ನೆರವು ನೀಡಬೇಕು ಎಂದು 50ಕ್ಕೂ ಹೆಚ್ಚು ಮನವಿ ಸಲ್ಲಿಸಿದ್ದೇವೆ. ಅವುಗಳಲ್ಲಿ ಕೆಲವನ್ನು ಸರ್ಕಾರ ಪರಿಗಣಿಸಿದೆ. ಆಸ್ತಿ, ವಾಣಿಜ್ಯ ತೆರಿಗೆ ಪಾವತಿ ಅವಧಿಯನ್ನು ರಾಜ್ಯ ಸರ್ಕಾರ ಜೂನ್ 30ರವರೆಗೆ ವಿಸ್ತರಿಸಿದೆ.
ವಿದ್ಯುತ್ ಬಿಲ್ ಪಾವತಿಯಲ್ಲಿ ರಿಯಾಯಿತಿ ನೀಡಿದೆ. ಎಪಿಎಂಸಿ ವಹಿವಾಟುಗಳ ಅವಧಿಯನ್ನು ವಿಸ್ತರಣೆ ಮಾಡಿದೆ. ಕೇಂದ್ರ ಸರ್ಕಾರ ಆದಾಯ ತೆರಿಗೆ ಹಾಗೂ ಜಿಎಸ್ಟಿ ಪಾವತಿ ಅವಧಿಯನ್ನು ವಿಸ್ತರಣೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ವಿದ್ಯುತ್ ದರವನ್ನು 30 ಪೈಸೆಗೆ ಹೆಚ್ಚಿಸಿರುವುದು ಸರಿಯಲ್ಲ, ಕೂಡಲೇ ದರ ಹೆಚ್ಚಳದ ಆದೇಶ ಹಿಂಪಡೆಯಬೇಕು. ಮುಂದಿನ 2-3 ವರ್ಷ ವಿದ್ಯುತ್ ದರ ಹೆಚ್ಚಳ ಮಾಡಬಾರದು ಎಂದು ಎಫ್ಕೆಸಿಸಿಸಿಐ ಅಧ್ಯಕ್ಷ ಪೆರಿಕಲ್ ಎಂ.ಸುಂದರ್ ಸರ್ಕಾವನ್ನು ಒತ್ತಾಯಿಸಿದ್ದಾರೆ.
ಓದಿ:ಆರೋಗ್ಯ ಇಲಾಖೆ ಎಡವಟ್ಟು: 15 ನಿಮಿಷದಲ್ಲೇ ಎರಡು ವ್ಯಾಕ್ಸಿನ್ ಪಡೆದ ಮಹಿಳೆ