ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ಹೆಸರಿನಲ್ಲಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕರಿಂದ 3 ಲಕ್ಷ ರೂ. ಪಡೆದು ಸೈಬರ್ ಕಳ್ಳರು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಬಿಎಂಆರ್‌ಸಿಎಲ್ ಪ್ರಧಾನ ವ್ಯವಸ್ಥಾಪಕ ಎನ್.ಆರ್. ವ್ಯಾಸರಾಜ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಪೂರ್ವ ವಿಭಾಗ ಸಿ.ಇ.ಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಾರ್ಚ್ 3 ರಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪರ್ವೇಜ್ ಹೆಸರಿನಲ್ಲಿ ಅಪರಿಚಿತನೊಬ್ಬ ವ್ಯಾಸರಾಜ್‌ಗೆ ಈಮೇಲ್ ಮಾಡಿ ವಾಟ್ಸ್‌ಆ್ಯಪ್ ಮೊಬೈಲ್ ನಂಬರ್ ಕೇಳಿದ್ದಾನೆ. ಅಂಜುಂ ಪರ್ವೇಜ್ ಎಂದು ನಂಬಿ ವ್ಯಾಸರಾಜ್ ತಮ್ಮ ವಾಟ್ಸ್‌ಆ್ಯಪ್ ನಂಬರ್ ಕೊಟ್ಟಿದ್ದಾರೆ. ನಂತರ ಅಪರಿಚಿತ, ವಾಟ್ಸ್ಆ್ಯಪ್ನಲ್ಲಿ ಲಿಂಕ್ ಕಳುಹಿಸಿ 3 ಲಕ್ಷ ರೂ. ಮೌಲ್ಯದ ಅಮೆಜಾನ್ ಗಿಫ್ಟ್ ವೋಚರ್ ಖರೀದಿಸುವಂತೆ ಸೂಚನೆ ಕೊಟ್ಟಿದ್ದಾನೆ.
ಇದನ್ನು ನಂಬಿದ ವ್ಯಾಸರಾಜ್, ತಕ್ಷಣ ತನ್ನ ಬ್ಯಾಂಕ್ ಖಾತೆಯಲ್ಲಿದ್ದ 2 ಲಕ್ಷ ರೂ. ಮತ್ತು ಬಿಎಂಆರ್‌ಸಿಎಲ್ ಉಪ ಪ್ರಧಾನ ವ್ಯವಸ್ಥಾಪಕ (ಹಣಕಾಸು) ವೀರಭದ್ರ ಹಾದಿಮನಿಯಿಂದ 1 ಲಕ್ಷ ರೂ. ಪಡೆದು 3 ಲಕ್ಷ ರೂ. ಮೌಲ್ಯದ ಅಮೆಜಾನ್ ಗಿಫ್ಟ್ ವೋಚರ್ ಖರೀದಿಸಿದ್ದಾರೆ. ಆನಂತರ ಇಂಡಿಯನ್ ಕೋವಿಡ್ ಫಂಡ್ ರೈಸಿಂಗ್ ಎಂಬ ವಿಳಾಸಕ್ಕೆ ಕಳುಹಿಸಿದ್ದಾರೆ.
ಇದನ್ನೂ ಓದಿ: 'ನಮಾಮಿ ಗಂಗೆ'ಗೆ ಇದುವರೆಗೆ ಎಷ್ಟು ಕೋಟಿ ಖರ್ಚು ಮಾಡಲಾಗಿದೆ ಗೊತ್ತಾ?
ಈ ಕುರಿತು ಅಂಜುಂ ಪರ್ವೇಜ್ ಗಮನಕ್ಕೆ ತಂದಾಗ ಅಂತಹ ಯಾವುದೇ ಕೋರಿಕೆ ಮಾಡಿಲ್ಲ ಎಂಬುದು ಗೊತ್ತಾಗಿದೆ. ಕೊನೆಗೆ ಸೈಬರ್ ವಂಚನೆಗೆ ಮೋಸ ಹೋಗಿರುವುದನ್ನ ತಿಳಿದು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ತನಿಖೆ ಕೈಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.