ಬೆಂಗಳೂರು: ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೆಲೆಮಲ್ಲೂರು ಗ್ರಾಮದ ಸ್ವಾಮಿ ಮತ್ತು ಸುಧಾ ದಂಪತಿಗೆ ಗಂಡು ಮಗು ಜನಿಸಿದೆ. ಆದರೆ, ಸ್ಕ್ಯಾನಿಂಗ್ ರಿಪೋರ್ಟ್ನಲ್ಲಿ ಮಗುವಿನ ಹೃದಯದಲ್ಲಿ ರಂಧ್ರವಿರುವುದು ತಿಳಿದು ಬಂದಿದೆ.
ತೀವ್ರ ಸಮಸ್ಯೆಯಿಂದ ಬಳಲುತ್ತಿರುವ ಮಗುವನ್ನ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಯ್ತು. ಇದಕ್ಕಾಗಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಆ್ಯಂಬುಲೆನ್ಸ್ನೊಂದಿಗೆ ಎಸ್ಕಾರ್ಟ್ ವಾಹನದ ವ್ಯವಸ್ಥೆ ಮಾಡಿದ್ದರು. ಅದರಂತೆ ಮಗುವನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ಕರೆತರಲಾಯ್ತು.
ಈ ಬಗ್ಗೆ ಮಾತನಾಡಿರುವ ಆ್ಯಂಬುಲೆನ್ಸ್ ಚಾಲಕ ಸದ್ದಾಂ ಹುಸೇನ್, ಮಗುವನ್ನ ಯಶಸ್ವಿಯಾಗಿ ತಲುಪಿಸಿದ ಖುಷಿಯಿದೆ. ಬೆಳಗ್ಗೆ 9:15ಕ್ಕೆ ಹೊರಟು 12:25ಕ್ಕೆ ಕರೆ ತಂದಿದ್ದೇವೆ. ತುಂಬಾ ಚಾಲೆಂಜಿಂಗ್ ಆಗಿತ್ತು. ವಾಹನವನ್ನು ವೇಗವಾಗಿ ಚಾಲನೆ ಮಾಡುವುದರ ಜೊತೆಗೆ ಮಗುವನ್ನು ಸೇಫ್ ಆಗಿ ಕರತರಬೇಕಿತ್ತು. ಸದ್ಯ ದೇವರ ದಯೆ ಮಗು ಜತೆಗೆ ಸುರಕ್ಷಿತವಾಗಿ ತಲುಪಿದ್ದೇವೆ. ಬೆಂಗಳೂರಿನಲ್ಲಿ ಟ್ರಾಫಿಕ್ ಕ್ಲಿಯರ್ ಮಾಡಿದ್ರೆ ಇನ್ನಷ್ಟು ಬೇಗ ಬರುಬಹುದಿತ್ತು. ಮಗು ಆರೋಗ್ಯವಾಗಿರಲಿದೆ ಅನ್ನೋ ನಂಬಿಕೆಯಿದೆ ಅಂತಾ ಹೇಳಿದರು.
ಜಯದೇವ್ ಆಸ್ಪತ್ರೆಯ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್ ಅವರು ಮಾತನಾಡಿ, ಇವತ್ತು ಮಗುವನ್ನು ಆ್ಯಂಬ್ಯುಲೆನ್ಸ್ ಮೂಲಕ ಶಿವಮೊಗ್ಗದಿಂದ ಜಯದೇವ ಆಸ್ಪತ್ರೆಗೆ ಕರೆತರಲಾಗಿತ್ತು. ಮಗುವಿನ ಹೃದಯದಲ್ಲಿ ಮೂರು ರಂಧ್ರಗಳಿವೆ. ಮಗು ಏಳೇ ತಿಂಗಳಿಗೆ ಜನಿಸಿದೆ. ಫ್ರೀ ಮೆಚ್ಯುವರ್ ಡೆಲಿವರಿ ಆಗಿದೆ. ಮಗು ಜನಿಸಿದಾಗ 1.5 ಕೆಜಿ ತೂಕವಿತ್ತು. ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲು ಆಗುವುದಿಲ್ಲ. ಹೀಗಾಗಿ ಮಗುವನ್ನು ಇಂದಿರಾಗಾಂಧಿ ಆಸ್ಪತ್ರೆಗೆ ರವಾನಿಸಲು ನಿರ್ಧರಿಸಿದ್ದೇವೆ. ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು ಚಿಕಿತ್ಸೆ ನೀಡಲಿದ್ದಾರೆ. ಎರಡ್ಮೂರು ತಿಂಗಳ ಬಳಿಕ ಮಗು ತೂಕ ಹೆಚ್ಚಿದ ಮೇಲೆ ಜಯದೇವದಲ್ಲಿ ಆಪರೇಷನ್ ಮಾಡುತ್ತೇವೆ ಅಂತಾ ತಿಳಿಸಿದ್ದಾರೆ.