ಬೆಂಗಳೂರು : ರಾಜ್ಯದ ಮೂರೂವರೆ ಲಕ್ಷ ಕುಟುಂಬಗಳಿಗೆ ಸರ್ಕಾರ ಹಕ್ಕುಪತ್ರಗಳನ್ನು ವಿತರಿಸುವ ಮೂಲಕ ಅಂತಹ ಕುಟುಂಬಗಳು ವಾಸಿಸುತ್ತಿರುವ ಮನೆಗಳ ಒಡೆತನವನ್ನು ನೀಡಲಾಗುತ್ತಿದೆ. ಇದಕ್ಕಾಗಿ ಈ ಬಡ ಕುಟುಂಬಗಳು ಕೇವಲ 2000 ರೂ. ವೆಚ್ಚ ಮಾಡಿದರೆ ಸಾಕಾಗುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಇಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮೂಡಲಪಾಳ್ಯ ವಾರ್ಡ್ನಲ್ಲಿ ಕೋವಿಡ್ ಸಂಕಷ್ಟಕ್ಕೆ ಒಳಗಾದ ಆರ್ಥಿಕವಾಗಿ ಹಿಂದುಳಿದವರು, ಬಡವರು, ಕಾರ್ಮಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಮೂಡಲಪಾಳ್ಯ, ನಾಗರಬಾವಿ, ಕಾವೇರಿಪುರ ಹಾಗೂ ನಾಯಂಡಹಳ್ಳಿ ವಾರ್ಡ್ಗಳಲ್ಲಿ ಅತಿ ಹೆಚ್ಚು ಬಡವರು ವಾಸಿಸುತ್ತಿದ್ದಾರೆ. ಇವರ ಜೀವನ ಭದ್ರತೆಗೆ ವಿಶೇಷ ಕಾಳಜಿವಹಿಸಲಾಗಿದೆ. ಕೇಂದ್ರದಲ್ಲಿ ಪ್ರಧಾನಮಂತ್ರಿಗಳು ಮುಂದಿನ ಡಿಸೆಂಬರ್ ತಿಂಗಳವರೆಗೆ ರಾಷ್ಟ್ರದ 80 ಕೋಟಿ ಜನರಿಗೆ ಪ್ರತಿ ತಿಂಗಳು ಉಚಿತ ಆಹಾರ ಧಾನ್ಯಗಳನ್ನು ವಿತರಿಸಲು ಆದೇಶಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಆರ್ಥಿಕ ನೆರವು ಸೇರಿದಂತೆ ಹಲವಾರು ಪ್ಯಾಕೇಜುಗಳನ್ನು ಘೋಷಿಸಿದ್ದಾರೆ, ಇದರೊಂದಿಗೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿ ಬಡವರಿಗೂ ಆಹಾರ ಧಾನ್ಯಗಳ ಕಿಟ್ ವಿತರಿಸುತ್ತಿರುವುದಾಗಿ ತಿಳಿಸಿದರು.
ಬಡವರು ಆತಂಕ, ಭಯಕ್ಕೀಡಾಗಬಾರದು ಎಂದು ಮನವಿ ಮಾಡಿದ ಸಚಿವರು, ಈ ಕ್ಷೇತ್ರದ ಜನತೆಯ ಜೊತೆ ತಾವು ಇದ್ದು, ಯೋಗಕ್ಷೇಮ ನೋಡಿಕೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ವಿಶ್ವನಾಥಗೌಡ, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ದಾಸೆಗೌಡ, ಯುವನಾಯಕ ಡಾ. ಅರುಣ್ ಸೋಮಣ್ಣ, ವಾಗೀಶ್, ಮೋಹನ್ ಕುಮಾರ್, ಶ್ರೀಧರ್ ಮುಂತಾದ ಕಾರ್ಯಕರ್ತರು ಸಚಿವರ ಜೊತೆಗೂಡಿದ್ದರು.
ಓದಿ: ಪಕ್ಷದಲ್ಲಿ ಏನೇ ಆದರೂ ನಮ್ಮ ಕುರ್ಚಿ ಭದ್ರವಾಗಿರಲಿ : ವಲಸೆ ನಾಯಕರು ಅರುಣ್ ಸಿಂಗ್ಗೆ ಮನವಿ