ಬೆಂಗಳೂರು: ವ್ಯಾಕ್ಸಿನ್ ಆರಂಭವಾದ ಜನವರಿ 16 ರಿಂದ ಇಲ್ಲಿಯವರೆಗೂ 25,86,550 ಡೋಸ್ ಲಸಿಕೆ ಬಂದಿದೆ. ಈ ಪೈಕಿ ಕೋವ್ಯಾಕ್ಸಿನ್ ಎರಡು ಲಕ್ಷ ಬಂದಿದೆ.
45 ವರ್ಷ ಮೇಲ್ಪಟ್ಟವರಾಗಿದ್ರೆ ಯಾವುದೇ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಸಿಗಲಿದೆ. ಆದ್ರೆ 45 ವರ್ಷ ಕೆಳಗಿನವರಲ್ಲಿ ಆಯ್ದ ಗುಂಪುಗಳಿಗೆ ಮಾತ್ರ ಕೊಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ಯಾವುದೇ ನಿರ್ಬಂಧ ಇಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ ಇರುವಲ್ಲಿ ಕೊಡಬಹುದು. ಕೋವ್ಯಾಕ್ಸಿನ್ ಮಾತ್ರ ಎರಡನೇ ಡೋಸ್ಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯ ಆಯುಕ್ತರಾದ ಗೌರವ್ ಗುಪ್ತ ತಿಳಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗ್ತಿದೆ ಎಂಬ ಆರೋಪ ಇದ್ದು, ಸರ್ಕಾರದ ನಿಯಮ ಮೀರಿ ಹೆಚ್ಚಿನ ದರಕ್ಕೆ ವ್ಯಾಕ್ಸಿನ್ ಕೊಟ್ಟರೆ ಕ್ರಮ ಕೈಗೊಳ್ಳಲಾಗ್ತದೆ. ಲಸಿಕೆಗಳನ್ನು ದಿನಕ್ಕೆ 45 ವರ್ಷ ಮೇಲ್ಪಟ್ಟವರಿಗೆ 25 ಸಾವಿರ ಜನರಿಗೆ, 18-44 ವರ್ಷದವರಿಗೆ 20 ರಿಂದ 25 ಸಾವಿರ ಜನರಿಗೆ ಕೊಡುತ್ತಿದ್ದೇವೆ ಎಂದರು.
ಇನ್ನು ನಗರದಲ್ಲಿ ವ್ಯಾಕ್ಸಿನೇಶನ್ ಡ್ರೈವ್ ದಿನದಿಂದ ದಿನಕ್ಕೆ ಹೆಚ್ಚಳ ಆಗ್ತಿದೆ. ಸರ್ಕಾರ ಸೂಚಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ವ್ಯಾಕ್ಸಿನ್ ನೀಡುತ್ತಿರುವುದರಿಂದ ಕಳೆದ ಮೂರು ದಿನಗಳಿಂದ ನಗರದಲ್ಲಿ ವ್ಯಾಕ್ಸಿನೇಶನ್ಗೆ ವೇಗ ಸಿಕ್ಕಿದೆ.
ಕಳೆದ 7 ದಿನಗಳಲ್ಲಿ ನಿತ್ಯ ಎಷ್ಟು ಮಂದಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂಬ ಅಂಕಿಅಂಶ
ದಿನಾಂಕ | ವ್ಯಾಕ್ಸಿನೇಶನ್ |
ಮೇ 20 | 26365 |
ಮೇ 21 | 33868 |
ಮೇ 22 | 39534 |
ಮೇ 23 | 30185 |
ಮೇ 24 | 52778 |
ಮೇ 25 | 56241 |
ಮೇ 26 | 75347 |
ಟೆಸ್ಟಿಂಗ್ ವಿಚಾರವಾಗಿ ಮಾತನಾಡಿದ ಆಯುಕ್ತರು, ಎಲ್ಲಿಯೂ ಬಲವಂತವಾಗಿ ಟೆಸ್ಟಿಂಗ್ ಮಾಡಲು ಆಗುವುದಿಲ್ಲ. ಫ್ಯಾಮಿಲಿ ಕಾಂಟ್ಯಾಕ್ಟ್ ಹಾಗೂ ಸೋಂಕು ಲಕ್ಷಣ ಇರುವವರಿಗೆ ಮಾತ್ರ ಟೆಸ್ಟಿಂಗ್ ಮಾಡಲಾಗ್ತಿದೆ ಎಂದರು.
ಕೊರೊನಾ ಸೋಂಕಿತರ ವೈಯಕ್ತಿಕ ಮಾಹಿತಿ, ಡೇಟಾಗಳು ಪಾಲಿಕೆ ಪೋರ್ಟಲ್ನಿಂದ ಲೀಕ್ ಆಗುತ್ತಿರುವ ಆರೋಪ ಕೇಳಿಬಂದಿದ್ದು, ಇದಕ್ಕೆ ಉತ್ತರಿಸಿದ ಮುಖ್ಯ ಆಯುಕ್ತರು, ಜನಸಾಮಾನ್ಯರಿಗೆ ಸರ್ಟಿಫಿಕೇಟ್ ಸಿಗುತ್ತಿರಲಿಲ್ಲ. ಹೀಗಾಗಿ ಆ ಪ್ರಕ್ರಿಯೆ ಪ್ರಾರಂಭಿಸಿ, ಮೊಬೈಲ್ ನಂಬರ್, ಎಸ್ಆರ್ಎಫ್ ಹಾಕಿದರೆ ಎಲ್ಲಾ ಮಾಹಿತಿ ಸಿಗುತ್ತಿತ್ತು. ಆದ್ರೆ ಇದು ವಿಳಂಬವಾಗ್ತಿದ್ದ ಹಿನ್ನೆಲೆ ಮಾರ್ಚ್ ತಿಂಗಳಲ್ಲಿ ಎಸ್ಆರ್ಎಫ್ ಮಾಹಿತಿ ಹಾಕುವುದನ್ನು ತೆಗೆಯಲಾಯ್ತು. ಆದರೆ ನಂತರ ಆ ಮಾಹಿತಿ ಯಾರಿಗೆ ಬೇಕಾದರೂ ಸಿಗುತ್ತಿತ್ತು. ಈ ಹಿನ್ನಲೆ, ಸದ್ಯಕ್ಕೆ ಪಬ್ಲಿಕ್ ಪೋರ್ಟಲ್ನಲ್ಲಿ ಈ ಮಾಹಿತಿ ಹಾಕುವುದನ್ನು ನಿಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಒಟಿಪಿ ಪಡೆದು ಸರ್ಟಿಫಿಕೇಟ್ ನೀಡಲಾಗ್ತದೆ ಎಂದರು.