ಬೆಂಗಳೂರು: ನಗರದಲ್ಲಿ ಇಂದು 2,233 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಅಲ್ಲದೆ 22 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ಇದೀಗ 53,324ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳು 36,523ಕ್ಕೆ ಬಂದು ನಿಂತಿದೆ.
ಇಂದು ಅತಿಹೆಚ್ಚು ಮಂದಿ ಗುಣಮುಖರಾಗಿದ್ದು, ಒಟ್ಟು 1,912 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೆಲವರು ಹೋಂ ಐಸೋಲೇಷನ್ ಮುಗಿಸಿದ್ದಾರೆ. ಈವರೆಗೆ ಒಟ್ಟು 1,009 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ.
ಬಿಬಿಎಂಪಿ ಟಾಸ್ಕ್ಫೋರ್ಸ್ ಕಮಿಟಿಯ ಸಲಹೆಯಂತೆ, ವಾರ್ಡ್ ಮಟ್ಟದಲ್ಲಿ ಕೆಲಸ ಮಾಡಲು ಸ್ವಯಂ ಸೇವಕರನ್ನು ನೇಮಿಸುವುದು ಬಹುದೊಡ್ಡ ತಲೆ ನೋವಾಗಿದೆ. ಕಂಟೈನ್ಮೆಂಟ್ ಝೋನ್ಗಳನ್ನು ಕಡ್ಡಾಯವಾಗಿ ಬಂದ್ ಮಾಡಲು, ಆ ವ್ಯಾಪ್ತಿಯ ಹಿರಿಯರನ್ನು, ಇತರೆ ರೋಗಿಗಳನ್ನು ಟೆಸ್ಟ್ ಮಾಡಲು ವಾರ್ಡ್ ಲೆವೆಲ್ ತಂಡ ರಚನೆಯಲ್ಲಿ ವಿಳಂಬವಾಗುತ್ತಿದೆ.
ಈ ಹಿನ್ನೆಲೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಜೊತೆ ವಾರ್ ರೂಂನಲ್ಲಿ ಸಭೆ ನಡೆಸಿ, ಕೊರೊನಾ ತಡೆಯುವಿಕೆ ಕುರಿತು ಹೊಸ ಮಾರ್ಗಸೂಚಿಗಳ ಬಗ್ಗೆ ಚರ್ಚೆ ನಡೆಸಿದರು.