ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ತಮ್ಮದೇ ಆದ ಮಾರ್ಗದಲ್ಲಿ ಮುಂದಿನ ಚುನಾವಣೆ ಕುರಿತು ಸಮೀಕ್ಷೆ ನಡೆಸುವ ಮೂಲಕ ಮಾಹಿತಿ ಸಂಗ್ರಹ ಮಾಡಿಕೊಳ್ಳುತ್ತಿದೆ. ಜನತಾ ಜಲಧಾರೆ ರಥಯಾತ್ರೆ ನಂತರ ಬೇರೆ ಪಕ್ಷಗಳ ನಾಯಕರನ್ನು ಸೆಳೆಯುವ ಕಾರ್ಯವೂ ಆರಂಭವಾಗಲಿದೆ. 2023 ರ ಜನವರಿ ವೇಳೆಗೆ ಪಕ್ಷ ಸಂಘಟನೆಯನ್ನು ಮತ್ತಷ್ಟು ಗಟ್ಟಿಯಾಗಲಿದೆ ಎಂಬುದು ಜೆಡಿಎಸ್ ನಾಯಕರ ವಿಶ್ವಾಸವಾಗಿದೆ.
ಈಗಾಗಲೇ ವಿಧಾನಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ದಳಪತಿಗಳು ಈ ಬಾರಿ ಪ್ರಾದೇಶಿಕ ಅಸ್ಮಿತೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಇದಕ್ಕೆ ಪೂರಕವಾಗಿ ನಾಡಿನ ನೆಲ-ಜಲ, ಭಾಷೆಯ ವಿಚಾರಗಳನ್ನು ಮುನ್ನೆಲೆಗೆ ತರಲು ಕಾರ್ಯತಂತ್ರ ರೂಪಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆ ಬಹುಮತ ಕೊಡಿ, ಐದು ವರ್ಷದಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೆ ತರುತ್ತೇನೆ, ಇಲ್ಲದಿದ್ದರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಈಗಾಗಲೇ ಬಹಿರಂಗ ಹೇಳಿಕೆ ನೀಡುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಮತ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಮುಸ್ಲಿಂ-ದಲಿತ ಧ್ರುವೀಕರಣ: ರಾಜ್ಯದಲ್ಲಿ ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ ಮತದಾರರ ಮನಸ್ಸನ್ನು ಗೆಲ್ಲಲು ಮುಂದಾಗಿರುವ ಹೆಚ್ ಡಿಕೆ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಲವು ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದಾರೆ. ಇದರ ನಡುವೆ ಇತ್ತೀಚೆಗೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ವಿರುದ್ಧ ಮುಗಿಬಿದ್ದಿರುವ ಕುಮಾರಸ್ವಾಮಿ, ಅಲ್ಪಸಂಖ್ಯಾತರ ಓಲೈಕೆಯ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಜೊತೆಗೆ ದಲಿತ ಮುಖ್ಯಮಂತ್ರಿ ಎಂಬ ರಾಜಕೀಯ ದಾಳವನ್ನೂ ಉರುಳಿಸಿದ್ದಾರೆ. ಇದು 'ಮುಸ್ಲಿಂ-ದಲಿತ' ಧ್ರುವೀಕರಣದ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.
ಆಪರೇಷನ್ ಜೆಡಿಎಸ್: ಸಿ.ಎಂ. ಇಬ್ರಾಹಿಂ ಜೆಡಿಎಸ್ ಸೇರ್ಪಡೆಯಿಂದ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಲ್ಪಸಂಖ್ಯಾತ ಹಾಗೂ ದಲಿತ ಮುಖಂಡರನ್ನು ಪಕ್ಷಕ್ಕೆ ಸೆಳೆಯಲು “ಆಪರೇಷನ್ ಜೆಡಿಎಸ್" ನೀಲನಕ್ಷೆಯೂ ಸಿದ್ಧಗೊಂಡಿದೆ ಎನ್ನಲಾಗುತ್ತಿದೆ. ಈಗಾಗಲೇ ಚುನಾವಣೆ ತಯಾರಿ ಆರಂಭಿಸಿರುವ ಜೆಡಿಎಸ್ ಜನತಾ ಸರ್ಕಾರ ಎಂಬ ಸಂಕಲ್ಪದೊಂದಿಗೆ ಪಂಚರತ್ನ ಯೋಜನೆ ಘೋಷಿಸಿ ಜನತಾ ಪರ್ವ 1.0 ಹಾಗೂ ಮಿಷನ್-123 ಹೆಸರಲ್ಲಿ ನಾಲ್ಕು ದಿನದ ಕಾರ್ಯಾಗಾರ ನಡೆಸಿದೆ.
ಮಿಷನ್-123: ಪ್ರಸ್ತುತ ಜೆಡಿಎಸ್ ಸಂಖ್ಯಾಬಲ 32 ಇದೆ. ಈ ಪೈಕಿ ಬಹುತೇಕ ಹಳೇ ಮೈಸೂರು ಭಾಗದಲ್ಲೇ ಜೆಡಿಎಸ್ ಪ್ರಾಬಲ್ಯ ಹೊಂದಿದೆ. ಈ ಮಧ್ಯೆ ಮಿಷನ್-123 ಗುರಿ ಇಟ್ಟುಕೊಂಡಿರುವ ಜೆಡಿಎಸ್‌ಗೆ ಅದು ಅಷ್ಟು ಸುಲಭದ ಮಾತಲ್ಲ. ಈ ಗುರಿ ಸಾಧಿಸಬೇಕಾದರೆ ಈಗಿರುವ ಸ್ಥಾನಗಳನ್ನು ಉಳಿಸಿಕೊಂಡು ಹಳೇ ಮೈಸೂರು ಭಾಗದ ಜೊತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರದರ್ಶನ ತೋರಬೇಕಾಗುತ್ತದೆ, ಉಪಚನಾವಣೆಗಳು ಮತ್ತು ವಿಧಾನಪರಿಷತ್ ಚುನಾವಣೆಗಳಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಯೂ ಪಕ್ಷಕ್ಕೆ ಗೊತ್ತಿದೆ. ಹಳೇ ಮೈಸೂರು ಭಾಗದಲ್ಲಿ ಅನೇಕರು ಪಕ್ಷದಿಂದ ದೂರ ಸರಿಯುತ್ತಿದ್ದಾರೆ. ಆದರೂ, ದಳಪತಿಗಳು ಮಾತ್ರ ಎದೆಗುಂದದೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.
ಹಾಲಿ ಶಾಸಕರ ಪೈಕಿ ಪಕ್ಷದಲ್ಲಿ ಉಳಿದುಕೊಂಡವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಬಹುತೇಕ ಖಚಿತ. ಇದನ್ನು ಹೊರತುಪಡಿಸಿದರೆ ಟಿಕೆಟ್ ಹಂಚಿಕೆ ಜೆಡಿಎಸ್ ನಲ್ಲಿ ಯಾವತ್ತೂ ಸವಾಲಿನ ಕೆಲಸ. ಆಮದು ಅಥವಾ ಎರವಲು ಅಭ್ಯರ್ಥಿಗಳನ್ನು ಜೆಡಿಎಸ್ ನೆಚ್ಚಿಕೊಳ್ಳಬೇಕಾಗುತ್ತದೆ. ಕಾಂಗ್ರೆಸ್-ಬಿಜೆಪಿಯಲ್ಲಿ ಟಿಕೆಟ್ ವಂಚಿತರು, ಅತೃಪ್ತರು ಕೊನೇ ಘಳಿಗೆಯಲ್ಲಿ ಜೆಡಿಎಸ್ ಸೇರಿ ಟಿಕೆಟ್ ಗಿಟ್ಟಿಸಿಕೊಳ್ಳುವ ಸಂದರ್ಭಗಳು ಹೆಚ್ಚಾಗಿರುತ್ತವೆ. ಹೀಗಾಗಿ, ಅಭ್ಯರ್ಥಿಗಳ ಆಯ್ಕೆ, ಟಿಕೆಟ್ ಹಂಚಿಕೆಗೆ ಜೆಡಿಎಸ್‌ಗೆ ಕಾದು ನೋಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಸಿಎಂ ಬದಲಾವಣೆ ಬಿಜೆಪಿಯ ಆಂತರಿಕ ವಿಚಾರ, ನಮಗ್ಯಾಕೆ ಬೇಕು? : ಡಿಕೆಶಿ