ಬೆಂಗಳೂರು: 13 ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಲ್ಲಿಯೇ ಆಯೋಜನೆ ಮಾಡುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
![2021-air-show-in-bangalore-cm-appeals-to-defense-minister](https://etvbharatimages.akamaized.net/etvbharat/prod-images/6322280_thum.jpg)
ದೆಹಲಿ ಪ್ರವಾಸದಲ್ಲಿರುವ ಸಿಎಂ ಬಿಎಸ್ವೈ, ರಾತ್ರಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದರು. ಈ ವೇಳೆ ವಿಶೇಷವಾಗಿ ವೈಮಾನಿಕ ಪ್ರದರ್ಶನದ ಕುರಿತು ಚರ್ಚೆ ನಡೆಸಿದರು. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯಲಿರುವ ಏರ್ ಶೋ 2019 ರಲ್ಲಿ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆದಿದೆ. ಮುಂದಿನ ಏರ್ ಶೋ 2021 ರ ಫೆಬ್ರವರಿಯಲ್ಲಿ ನಡೆಯಲಿದ್ದು, ಈ ಬಾರಿಯೂ ಇಲ್ಲಿಯವರೆಗೆ ಆಯೋಜನೆ ಮಾಡಿಕೊಂಡು ಬಂದಿರುವಂತೆಯೇ ಸಿಲಿಕಾನ್ ಸಿಟಿಯಲ್ಲಿಯೇ ಏರ್ ಶೋ ಆಯೋಜನೆ ಮಾಡಿ ಎಂದು ಮನವಿ ಪತ್ರ ಸಲ್ಲಿಸಿದರು.
ಕೇಂದ್ರ ರಕ್ಷಣಾ ಇಲಾಖೆ ಆಯೋಜನೆ ಮಾಡುವ ಏರ್ ಶೋ ಗೆ ಯಲಹಂಕ ವಾಯುನೆಲೆ ಪ್ರಶಸ್ತ ಸ್ಥಳವಾಗಿದೆ. ಏರ್ ಶೋಗೆ ರಾಜ್ಯ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದು ಸಿಎಂ ಕೇಂದ್ರ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ.