ಹೊಸ ವರ್ಷದ ಸಂಭ್ರಮದ ಗುಂಗಿನಲ್ಲಿದ್ದ ಕನ್ನಡ ಸಿನಿರಂಗಕ್ಕೆ ಆದಾಯ ತೆರಿಗೆ ಇಲಾಖೆಯವರು ಮೊದಲ ವಾರದಲ್ಲೇ ಶಾಕ್ ನೀಡಿ ಹೆಸರಾಂತ ನಟರು, ನಿರ್ದೇಶಕರು, ಚಿತ್ರ ವಿತರಕರ ಮನೆಗಳ ಮೇಲೆ ದಾಳಿ ನಡೆಸಿ ಕಡತಗಳ ಜೊತೆ ಕೆಲ ದಾಖಲೆಗಳನ್ನ ವಶಪಡಿಸಿಕೊಂಡಿದ್ದರು.
ದಾಳಿಗೆ ಒಳಗಾದವರು ಬಹಳ ಪ್ರತಿಷ್ಠಿತ ಹಾಗೂ ಬಹಳಷ್ಟು ಹೆಸರು ಗಳಿಸಿದವರಾಗಿದ್ದರು. ಪ್ರತಿ ವರ್ಷ ಆದಾಯ ತೆರಿಗೆ ಇಲಾಖೆಗೆ ತೆರಿಗೆ ಕಟ್ತಾರೆ. ಆದ್ರೆ 2019ರಲ್ಲಿ ಬಜೆಟ್ ಮಟ್ಟದಲ್ಲಿ ಬಹಳ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಐಟಿ ದಾಳಿ ಮಾಡಿ ತನಿಖೆ ಮುಂದುವರೆಸಿತ್ತು.
ಮಾರ್ಚ್ 28-2019 ಉದ್ಯಮಿ ಮನೆಗಳ ಮೇಲೆ ದಾಳಿ
ಚಂದನವನಕ್ಕೆ ಶಾಕ್ ಕೊಟ್ಟ ನಂತ್ರ ಐಟಿ ದಾಳಿ ಮಾಡಿದ್ದು ಉದ್ಯಮಿಗಳ ಮನೆ ಮೇಲೆ. ಸಿಲಿಕಾನ್ ಸಿಟಿಯಲ್ಲಿರುವ ಬಸವನಗುಡಿ, ಸೌಂತ್ ಎಂಡ್ ಸರ್ಕಲ್, ಜಯನಗರ ಸೇರಿದಂತೆ 15 ಉದ್ಯಮಿಗಳ ಮನೆಗಳ ಮೇಲೆ ದಾಳಿ ಮಾಡಿ ದಾಖಲೆ ಪತ್ರ, ಕಡತಗಳನ್ನು ಅಧಿಕಾರಿಗಳು ವಶಪಡಿಸಿದ್ದರು. ಇವರ ಆದಾಯದಲ್ಲಿ ಬಹಳ ಏರುಪೇರು ಕಂಡುಬಂದ ಹಿನ್ನೆಲೆ ದಾಳಿ ನಡೆಸಲಾಗಿತ್ತು.
ಮಾರ್ಚ್ 28-2019 ಮಾಜಿ ಸಚಿವ ಎಸ್.ಪುಟ್ಟರಾಜ್ ಮನೆ ಮೇಲೆ ದಾಳಿ
ಮಾರ್ಚ್ ತಿಂಗಳಿನಲ್ಲಿ ಉದ್ಯಮಿಗಳು ಮಾತ್ರವಲ್ಲದೇ ರಾಜಾಕಾರಣಿಗಳಿಗೂ ಐಟಿ ಶಾಕ್ ನೀಡಿ ಮಂಡ್ಯ ಉಸ್ತುವಾರಿ ಸಚಿವರಾಗಿದ್ದ ಎಸ್.ಪುಟ್ಟರಾಜುಗೆ ಸೇರಿದ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು. ಅಷ್ಟು ಮಾತ್ರವಲ್ಲದೇ ಪುಟ್ಟರಾಜು ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಲಾಗಿತ್ತು.
ಮಾರ್ಚ್ 28-2019 ಕಾಂಗ್ರೆಸ್ ಮುಖಂಡ ಬಿ.ರೇವಣ್ಣ ಮನೆ ಮೇಲೆ ದಾಳಿ
ಮಂಡ್ಯದ ಕಾಂಗ್ರೆಸ್ ಮುಖಂಡರಾಗಿದ್ದ ಬಿ.ರೇವಣ್ಣ ಅವರ ಮೈಸೂರಿನ ನಾಗನಹಳ್ಳಿ ಬಳಿ ಇರುವ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ವಿಶೇಷ ಅಂದ್ರೆ ರೇವಣ್ಣ ಅವರ ಹುಟ್ಟುಹಬ್ಬ ಕೂಡ ಅದೇ ದಿನವಾಗಿತ್ತು. ಇನ್ನು ಇವರು ಲಾರಿ ಮಾಲೀಕರು ಕೂಡ ಆಗಿದ್ದು, ಆದಾಯದಲ್ಲಿ ಬಹಳ ವ್ಯತ್ಯಾಸ ಕಂಡು ಬಂದಿತ್ತು ಎನ್ನಲಾಗಿದೆ.
ಈ ದಾಳಿಯನ್ನ ನೋಡಿದ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರ ಐಟಿ ಇಲಾಖೆ ದುರ್ಬಳಕೆ ಮಾಡಿ ದಾಳಿ ಮಾಡಿಸುತ್ತಿದೆ ಎಂಬ ಆರೋಪ ಮಾಡಿದ್ದರು. ಹಾಗೆಯೇ ಆ ಅವಧಿಯಲ್ಲಿದ್ದ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಇದರ ಬಗ್ಗೆ ಪ್ರತಿಕ್ರಿಯೆ ನೀಡಿ, 300 ಮಂದಿ ಐಟಿ ಅಧಿಕಾರಿಗಳು ಕಾಂಗ್ರೆಸ್, ಜೆಡಿಎಸ್ ಮುಖಂಡರ ಮನೆಗಳ ಮೇಲೆ ದಾಳಿ ನಡೆಸ್ತಾರೆಂಬ ಹೇಳಿಕೆ ನೀಡಿ ಬೆಂಗಳೂರಿನ ಆದಾಯ ತೆರಿಗೆ ಕಚೇರಿಯ ಬಳಿ ಪ್ರತಿಭಟನೆ ನಡೆಸಿದ್ದರು.
ಏಪ್ರಿಲ್ 21-2019 ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದಾಳಿ
ಲೋಕಸಭೆ ಚುನಾವಣೆಗೆ ಎರಡು ದಿನ ಬಾಕಿ ಇರುವ ಸಂದರ್ಭದಲ್ಲಿ ಚುನಾವಣೆಗೆ ಹಣ ಸಂಗ್ರಹ ಮಾಡಿದ್ದಾರೆಂಬ ಆರೋಪದ ಮೇಲೆ ಕೆಪಿಸಿಸಿ ಉಪಾಧ್ಯಕ್ಷ ಸೂರ್ಯ ನಾರಾಯಣರೆಡ್ಡಿ ಹಾಗೂ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ, ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಮನೆ ಮೇಲೆ ಐಟಿ ದಾಳಿ ನಡೆಸಿ ಹಲವಾರು ಕಡತ, ನಗದು ಜಪ್ತಿ ಮಾಡಿತ್ತು.
ಜುಲೈ 28-2019 ಕಾಫಿ ಡೇ ಮಾಲೀಕನಿಂದ ಐಟಿ ಮೇಲೆ ಆರೋಪ
ಒಂದೆಡೆ ರಾಜಾಕಾರಣಿಗಳ ಮೇಲೆ ದಾಳಿ ಮಾಡುತ್ತಿರುವ ಸಂದರ್ಭದಲ್ಲಿಯೇ ಆದಾಯ ತೆರಿಗೆ ಇಲಾಖೆಯವರ ಮೇಲೆ ಆರೋಪವೊಂದು ಕೇಳಿ ಬಂದಿತ್ತು. ಅದೇನೆಂದರೆ ಖ್ಯಾತ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ನಾಪತ್ತೆಯಾಗಿ ನಂತ್ರ ಶವವಾಗಿ ಪತ್ತೆಯಾಗಿದ್ದರು. ಆದರೆ ಇದೇ ಸಮಯದಲ್ಲಿ ಕಾಫಿ ಡೇ ಆಡಳಿತ ಮಂಡಳಿ ಕಡೆಯಿಂದ ಸಿದ್ಧಾರ್ಥ್ ಬರೆದ ಪತ್ರ ವೈರಲ್ ಆಗಿತ್ತು. ಅದರಲ್ಲಿ ಐಟಿ ಕಿರುಕುಳ ತಡೆಯಲು ಸಾಧ್ಯವಿಲ್ಲ ಎಂಬ ಆರೋಪವನ್ನು ಸಿದ್ಧಾರ್ಥ್ ಮಾಡಿದ್ರು. ಇದು ಬಹಳ ಸದ್ದು ಮಾಡಿ ರಾಜ್ಯ ರಾಜಕಾರಣಿಗಳು ಇದರ ಬಗ್ಗೆ ಹೇಳಿಕೆ ನೀಡಿದ್ದರು. ಈ ವೇಳೆ ಆದಾಯ ತೆರಿಗೆಯವರು ಸ್ಪಷ್ಟನೆ ನೀಡಿ ನಂತರ ಇದರ ಬಗ್ಗೆ ತನಿಖೆ ಕೂಡ ನಡೆದಿತ್ತು.
ಸೆಪ್ಟೆಂಬರ್ 3-2019 ಡಿಕೆಶಿ ಬಂಧನ
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ನಿವಾಸದ ಮೇಲೆ ಐಟಿ ದಾಳಿ ನಡೆಸಿ ನಂತರ ದೆಹಲಿಯ ಫ್ಲಾಟ್ನಲ್ಲಿ ಸಿಕ್ಕ 8.59 ಕೋಟಿ ಹಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯಕ್ಕೆ ಐಟಿ ದೂರು ನೀಡಿತ್ತು. ಐಟಿ ನೀಡಿದ ದಾಖಲಾತಿ ಮೇರೆಗೆ ಡಿಕೆಶಿಯನ್ನ ಇಡಿ ತಿಹಾರ್ ಜೈಲಿಗೆ ಕಳಿಸುವಲ್ಲಿ ಯಶಸ್ವಿಯಾಗಿತ್ತು.
ಅಕ್ಟೋಬರ್ 10-2019 ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಮನೆ ಮೇಲೆ ದಾಳಿ
ಡಿಕೆಶಿ ಬಂಧನವಾಗ್ತಿದ್ದ ಬೆನ್ನಲೇ ರಾಜ್ಯ ರಾಜಕಾರಣದಲ್ಲೇ ಸದ್ದು ಮಾಡಿದ ವಿಷಯ ಅಂದ್ರೆ ಮಾಜಿ ಡಿಸಿಎಂ ಡಾ. ಪರಮೇಶ್ವರ್ ಅವರ ನಿವಾಸ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ ಐಟಿ ದಾಳಿ. ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳಾದ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ ಹಾಗೆಯೇ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಶುಲ್ಕ ಹಾಗೂ ಸೀಟು ನೀಡಿಕೆಯಲ್ಲಿ ಏರುಪೇರು ಆರೋಪ ಹಿನ್ನೆಲೆ ದಾಳಿ ಮಾಡಿ ಹಲವಾರು ವಿಷಯಗಳ ದಾಖಲೆ ವಶಪಡಿಸಿಕೊಳ್ಳಲಾಗಿತ್ತು. ಪರಮೇಶ್ವರ್ ಅಣ್ಣನ ಮಗ ಹಾಗೂ ಕುಟುಂಬಸ್ಥರು, ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಮನೆ ಮೇಲೆ ದಾಳಿ ನಡೆಸಿದ್ರು. ದುರಂತ ಅಂದ್ರೆ ಐಟಿ ದಾಳಿ ಬಳಿಕ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದ. ಸದ್ಯ ಇದರ ತನಿಖೆ ಮುಂದುವರೆದಿದೆ.
ಅಕ್ಟೋಬರ್ 10-2019 ಆರ್.ಎಲ್ ಜಾಲಪ್ಪ ಒಡೆತನದ ಆಸ್ಪತ್ರೆ ಕಾಲೇಜಿನ ಮೇಲೆ ದಾಳಿ
ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಒಡೆತನದ ಆಸ್ಪತ್ರೆ, ದೇವರಾಜು ಅರಸ್ ವೈದ್ಯಕೀಯ ಕಾಲೇಜು ಮೇಲೆ ದಾಳಿ ಮಾಡಿ, ತೆರಿಗೆ ಪಾವತಿಗೆ ಸಂಬಂಧಿಸಿದಂತೆ ದಾಖಲೆ ಪತ್ರ ವಶಪಡಿಸಿಕೊಳ್ಳಲಾಗಿತ್ತು. ಹಾಗೆಯೇ ಇವರ ಪುತ್ರ ರಾಜೇಂದ್ರ ನಿವಾಸ ಹಾಗೂ ಕಚೇರಿ ಮನೆ ಮೇಲೆ ದಾಳಿ ನಡೆಸಲಾಗಿತ್ತು.
ಒಟ್ಟಾರೆ ಐಟಿ ಇಲಾಖೆ 2019ರಲ್ಲಿ ರಾಜಾಕಾರಣಿಗಳು, ಉದ್ಯಮಿ, ಸಿನಿರಂಗದವರಿಗೆ ಶಾಕ್ ನೀಡಿದ್ದು, ಸದ್ಯ ದಾಳಿಗೆ ತುತ್ತಾದವರ ಮೇಲಿನ ತನಿಖೆ ಮುಂದುವರೆದಿದೆ.