ಬೆಂಗಳೂರು: ರಾಜ್ಯದಲ್ಲಿನ ಬಾಡಿಗೆ ಮನೆಗಳಲ್ಲಿ ವಾಸಿಸುವವರೂ ಸೇರಿದಂತೆ ಎಲ್ಲ ಗೃಹಬಳಕೆದಾರರಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು. ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯಿಂದ ಬಾಡಿಗೆದಾರರು ವಂಚಿತರಾಗಲಿದ್ದಾರೆ ಎಂಬ ಆಪಾದನೆ ಕೇಳಿ ಬಂದ ಹಿನ್ನೆಲೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ.
ಬಾಡಿಗೆದಾರರೂ ಸೇರಿದಂತೆ ಗೃಹಬಳಕೆಯ ಎಲ್ಲರಿಗೂ ಗೃಹಜ್ಯೋತಿ ಯೋಜನೆಯ ಲಾಭ ಸಿಗಲಿದೆ. ಸರ್ಕಾರ ಘೋಷಿಸಿದಂತೆ 200 ಯೂನಿಟ್ವರೆಗೆ ಬಾಡಿಗೆದಾರರೂ ಬಿಲ್ ಪಾವತಿ ಮಾಡಬೇಕಿಲ್ಲ. ಸರ್ಕಾರ ಎಲ್ಲ ವರ್ಗದ ಜನರಿಗಾಗಿ ಯೋಜನೆ ರೂಪಿಸಿದೆ ಎಂದು ತಿಳಿಸಿದರು.
ದೇವರಾಜು ಅರಸು ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಗಸೂಚಿಯಲ್ಲಿ ಇರುವ ನಿಯಮಗಳು ಬಾಡಿಗೆದಾರರಿಗೂ ಅನ್ವಯವಾಗುತ್ತದೆ. ಅವರೂ ಕೂಡ 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡುತ್ತಿದ್ದಲ್ಲಿ ಬಿಲ್ ಕಟ್ಟಬೇಕಿಲ್ಲ ಎಂದು ಹೇಳಿದರು.
ಬಿಜೆಪಿ ವಿರುದ್ಧ ಟೀಕೆ: ಉಚಿತ ಘೋಷಣೆಗಳಲ್ಲಿನ ತೊಡಕುಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವಿನಾಕಾರಣ ಪ್ರತಿಭಟನೆ ಮಾಡುತ್ತಿದೆ. ಈ ಹಿಂದಿನ ಬಿಜೆಪಿ ಸರ್ಕಾರ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ನನ್ನ ನೇತೃತ್ವದ ಹಿಂದಿನ ಸರ್ಕಾರದಲ್ಲಿ ನೀಡಿದ 162 ಭರವಸೆಗಳಲ್ಲಿ 158 ಅನ್ನು ಈಡೇರಿಸಿದ್ದೇವೆ. ಅವರಿಗೆ ಬೇರೇನೂ ಮಾಡಲು ಕೆಲಸವಿಲ್ಲದ ಕಾರಣ ಅವರು ಟೀಕೆ ಮಾಡುತ್ತಿದ್ದಾರೆ ಅಷ್ಟೇ ಎಂದು ಟೀಕಿಸಿದರು.
ಸರ್ಕಾರ ರಚಿಸಿದ ತಕ್ಷಣ 10 ಗಂಟೆ ವಿದ್ಯುತ್ ಉಚಿತ, ರೈತರ ಸಾಲಮನ್ನಾ, ನೀರಾವರಿಗೆ ಒಂದೂವರೆ ಲಕ್ಷ ಕೋಟಿ ನೀಡುವ ಭರವಸೆ ನೀಡಿದ್ದರು. ಇದ್ಯಾವುದನ್ನೂ ಮಾಡದ ಬಿಜೆಪಿ ಜನವಿರೋಧಿ ಪಕ್ಷವಾಗಿದೆ. ಅವರಿಗೆ ನಮ್ಮನ್ನು ಪ್ರಶ್ನಿಸುವ ಯಾವುದೇ ನೈತಿಕತೆ ಇಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಹಣವನ್ನು ಲೂಟಿ ಹೊಡೆದು, ರಾಜ್ಯಕ್ಕೆ ಕೆಟ್ಟ ಹೆಸರು ತಂದರು. 2018 ರಲ್ಲಿ 600 ಭರವಸೆಗಳನ್ನು ನೀಡಿತ್ತು. ಅದರಲ್ಲಿ ಎಷ್ಟು ಜಾರಿ ಮಾಡಲಾಗಿದೆ ಎಂಬುದನ್ನು ಬಿಜೆಪಿ ಹೇಳಬೇಕು. ಈ ಹಿಂದಿನ ನನ್ನ ಅಧಿಕಾರವಧಿಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ಈಗ ಅಧಿಕಾರಕ್ಕೆ ಬಂದ 15 ದಿನದಲ್ಲಿ ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಇದು ನಮ್ಮ ಆಡಳಿತ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇಂದಿರಾ ಕ್ಯಾಂಟೀನ್, ಶೂ ಭಾಗ್ಯ, ಸೈಕಲ್ ವಿತರಣೆ, ಕೃಷಿ ಭಾಗ್ಯ, ಪಶು ಭಾಗ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ನಿಲ್ಲಿಸಿ ಜನದ್ರೋಹಿ ಕೆಲಸ ಮಾಡಿತು. ಬಿಜೆಪಿ ಸರ್ಕಾರ ಕಾಂಗ್ರೆಸ್ನ ಹಲವು ಯೋಜನೆಗಳಿಗೆ ಸ್ಥಗಿತಗೊಳಿಸಿ ಜನರಿಗೆ ಮೋಸ ಮಾಡಿತು ಎಂದು ಕಿಡಿಕಾರಿದರು.
ಮಾರ್ಗಸೂಚಿ ಪ್ರಕಟ: ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗೆ ಅನುಮೋದಿಸಿದ್ದ ರಾಜ್ಯ ಸರ್ಕಾರ, ಯೋಜನೆಗೆ ಸಂಬಂಧಿಸಿದ ಷರತ್ತು ಹಾಗೂ ನಿಬಂಧನೆಗಳ ಕುರಿತ ಮಾರ್ಗಸೂಚಿಯನ್ನು ಹೊರಡಿಸಿದೆ. ಗೃಹ ಜ್ಯೋತಿ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯಡಿ ಫಲಾನುಭವಿಗಳನ್ನು ಗೃಹ ಜ್ಯೋತಿ ಯೋಜನೆಯಡಿ ಸೇರ್ಪಡೆಗೊಳಿಸಲಾಗಿದೆ. ಗೃಹ ಜ್ಯೋತಿ ಯೋಜನೆಯಡಿ ರಾಜ್ಯದ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್ವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ ಯೂನಿಟ್ಗಳ ಮೇಲೆ ಶೇಕಡಾ 10ರಷ್ಟು ಹೆಚ್ಚಿನ ಬಳಕೆ ಮಿತಿಯನ್ನು ಅನುಮತಿಸಲಾಗಿದೆ.
ಇದನ್ನೂ ಓದಿ: 'ಗೃಹ ಜ್ಯೋತಿ' ಯೋಜನೆಯಡಿ ಪ್ರತಿ ಮನೆಗೆ ಉಚಿತ ವಿದ್ಯುತ್ : ಮಾರ್ಗಸೂಚಿ ಹೀಗಿದೆ