ಬೆಂಗಳೂರು: ಇಂದಿರಾನಗರದಲ್ಲಿರುವ ವಾಚ್ ಅಂಗಡಿಗೆ ನುಗ್ಗಿ ಎರಡು ಕೋಟಿ ರೂಪಾಯಿ ಬೆಲೆಬಾಳುವ ವಾಚ್ಗಳನ್ನು ಕದ್ದು ಪರಾರಿಯಾಗಿದ್ದ, ಬಿಹಾರ ಗ್ಯಾಂಗ್ನ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಮ್ಮನಪಾಳ್ಯದಲ್ಲಿ ನೆಲೆಸಿದ್ದ ಬಿಹಾರ ಮೂಲದ ಅಖ್ತರ್ ಎಂಬಾತನನ್ನು ಪೊಲೀಸರು ಬಂಧಿಸಿ, ಆತನ ಬಳಿ ಇದ್ದ 2 ಕೋಟಿ ರೂಪಾಯಿ ಮೌಲ್ಯದ ವಾಚ್ಗಳನ್ನು ಜಪ್ತಿ ಮಾಡಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನೂ ನಾಲ್ಕು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇಂದಿರಾನಗರದ 100 ಫಿಟ್ ರಸ್ತೆಯಲ್ಲಿ ಶಾಮೋಯಿಲ್ ಎಂಬುವರು ಹಲವು ವರ್ಷಗಳಿಂದ ಸಿಮನ್ಸ್ ಟೈಮ್ಸ್ ಶಾಪ್ ಹೆಸರಿನಲ್ಲಿ ದುಬಾರಿ ಮೌಲ್ಯದ ವಾಚ್ಗಳನ್ನು ಮಾರಾಟ ಮಾಡುತ್ತಿದ್ದರು. ಇದೇ ತಿಂಗಳ 4 ರಂದು ಅಂಗಡಿಗೆ ಕಳ್ಳರು ನುಗ್ಗಿ 129 ರಾಡೋ ವಾಚ್, ಲಾಂಜಿನ್ ಕಂಪನಿಯ 29, ಒಮೆಗಾದ 13 ವಾಚ್ಗಳನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇನ್‌ಸ್ಪೆಕ್ಟರ್ ಹರೀಶ್, ಸಬ್ಇನ್ಸ್ಪೆಕ್ಟರ್ ಅಮರೇಶ್ ಜೇಗರಕಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಿಹಾರ ಮೂಲದ ಆರೋಪಿಗಳು:
ಮೂಲತಃ ಬಿಹಾರದವನಾದ ಆರೋಪಿ ಹಾಗೂ ನಾಪತ್ತೆಯಾಗಿರುವ ಸಹಚರರು 2011 ಹಾಗೂ 2012ರಲ್ಲಿ ಅಶೋಕನಗರ, ಕಬ್ಬನ್‌ಪಾರ್ಕ್ ಹಾಗೂ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂಗಡಿಗೆ ನುಗ್ಗಿ ಲಕ್ಷಾಂತರ ಮೌಲ್ಯದ ಮೊಬೈಲ್ ಹಾಗೂ ಕ್ಯಾಮರಾಗಳನ್ನು ಕದ್ದಿದ್ದರು. ಪ್ರಕರಣ ದಾಖಲಾಗಿ ಹಲವು ವರ್ಷ ಕಳೆದಿದ್ದರೂ ಆರೋಪಿಗಳ ಬಂಧನ ಸಾಧ್ಯವಾಗಿರಲಿಲ್ಲ. ಕದ್ದ ವಸ್ತುಗಳನ್ನು ನೇಪಾಳದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದರು.
ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ 'ಹಾವೇರಿ ಡಾನ್': ಶರವೇಗದ ಹೋರಿ ಸಾವಿಗೆ ಸಾವಿರಾರು ಅಭಿಮಾನಿಗಳ ಕಂಬನಿ
ಕಳ್ಳತನವನ್ನೇ ಉದ್ಯೋಗ ಮಾಡಿಕೊಂಡಿದ್ದ ಆರೋಪಿಗಳು ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿನ ಮಂಗಮ್ಮನಪಾಳ್ಯದ ಮನೆಯೊಂದರಲ್ಲಿ ವಾಸ್ತವ್ಯ ಹೂಡಿದ್ದರು. ನಗರದೆಲ್ಲೆಡೆ ಸುತ್ತಾಡಿ ಕಳ್ಳತನಕ್ಕಾಗಿ ಸೂಕ್ತ ಅಂಗಡಿಗಳಿಗಾಗಿ ಶೋಧ ನಡೆಸಿದ್ದರು. ಕಳ್ಳತನ ನಡೆದ ಕೆಲ ದಿನಗಳ ಹಿಂದೆ ವಾಚ್ ಅಂಗಡಿಗೆ ಬಂದ ಖದೀಮರು ವಾಚ್ ಖರೀದಿಸಿ ಅಂಗಡಿ ಪೂರ್ತಿ ಸರ್ವೇ ನಡೆಸಿದ್ದಾರೆ. ಇದೇ ತಿಂಗಳು 4ರಂದು ರಾತ್ರಿ ಬೀಗ ಹಾಕಿದ ಶಾಪ್ಗೆ ನುಗ್ಗಿ 2 ಕೋಟಿ ರೂ. ಮೌಲ್ಯದ ದುಬಾರಿ ವಾಚ್ಗಳನ್ನು ಕಳ್ಳತನ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.